50,000 ಅರೆಸೇನಾಪಡೆ ಸಿಬ್ಬಂದಿ ಮತ್ತು ಕಾಶ್ಮೀರ ಪೊಲೀಸರಿಂದ ಸರ್ಪಗಾವಲು
ಶ್ರೀನಗರ: ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಪಾಕಿಸ್ಥಾನದ ಉಗ್ರರು ಧರ್ಮ ಕೇಳಿ ಹತ್ಯೆಗೈದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಅಮರನಾಥ ಯಾತ್ರೆಗೆ ಗರಿಷ್ಠ ಭದ್ರತೆ ಒದಗಿಸಲು ಏರ್ಪಾಡು ಮಾಡಿದೆ. ಯಾತ್ರಿಕರಿಗೆ ಬಹುಪದರದ ಗರಿಷ್ಠ ಭದ್ರತೆ ಕಲ್ಪಿಸುವ ಉದ್ದೇಶದಿಂದ ಭಾರತೀಯ ಸೇನೆ, ಸಿಆರ್‌ಪಿಎಫ್ ಹಾಗೂ ಕಾಶ್ಮೀರ ಪೊಲೀಸ್ ಇಲಾಖೆ ಜಂಟಿಯಾಗಿ `ಆಪರೇಷನ್ ಶಿವ’ ಯೋಜನೆಯನ್ನು ಜಾರಿಗೆ ತಂದಿದೆ.
‘ಆಪರೇಷನ್ ಶಿವ’ ಅಮರನಾಥ ಯಾತ್ರಿಕರಿಗೆ ಹೆಜ್ಜೆ ಹೆಜ್ಜೆಗೂ ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಿದೆ. ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭಗೊಳ್ಳಲಿದ್ದು ಆಗಸ್ಟ್ 9ಕ್ಕೆ ಮುಗಿಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 14 ದಿನಗಳು ಯಾತ್ರೆ ಅವಧಿ ತಗ್ಗಲಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಧಾರಿತ ಭದ್ರತಾ ತಂತ್ರಜ್ಞಾನ, ಸಿಸಿಟಿವಿ, ಜಾಮರ್‌ಗಳ ಅಳವಡಿಕೆ, ಡ್ರೋನ್ ಕ್ಯಾಮರಾ, ಸಶಸ್ತ್ರ ಪಡೆ ಕಣ್ಗಾವಲು ಸೇರಿದಂತೆ ಗರಿಷ್ಠ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಸುಮಾರು 50,000 ಅರೆಸೇನಾಪಡೆ ಸಿಬ್ಬಂದಿ ಮತ್ತು ಕಾಶ್ಮೀರ ಪೊಲೀಸರು ನಿತ್ಯ ಸ್ಫೋಟಕಗಳ ಪತ್ತೆ ಕಾರ್ಯಾಚರಣೆ ನಡೆಸಲಿದ್ದಾರೆ. ನೋಂದಾಯಿತ ಯಾತ್ರಿಕರಿಗೆ ‘ಆರ್‌ಎಫ್‌ಐಡಿ’ ಟ್ಯಾಗ್ ನೀಡಲಾಗಿದ್ದು, ಅಮರನಾಥ ಯಾತ್ರೆಯ ಪ್ರತಿಯೊಂದು ಕ್ಷಣದ ಮೇಲೂ ಇದರ ಮೂಲಕ ನಿಗಾ ವಹಿಸಬಹುದಾಗಿದೆ.

























