ಪುತ್ತೂರು: ನವತೇಜಸ್ ಅರ್ಪಿಸುವ ಘಮಘಮಿಸುವ ಮೂರು ದಿನಗಳ ’ಹಲಸು ಹಣ್ಣು ಮೇಳ’ಕ್ಕೆ ಶುಕ್ರವಾರ ಬೆಳಗ್ಗೆ ನಗರದ ಕಿಲ್ಲೇ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಈ ಹಣ್ಣಿನ ಮೇಳಕ್ಕೆ ಗ್ರಾಹಕ ವರ್ಗ ಸಜ್ಜಾಗಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದ್ದರು. ಸುಮಾರು 70 ಮಳಿಗೆಗಳನ್ನು ಮೇಳದಲ್ಲಿ ಜೋಡಿಸಲಾಗಿದ್ದು, ವಿವಿಧ ರೀತಿಯ ಹಣ್ಣುಗಳ ಜತೆಗೆ ಹಲಸಿನ ಹಣ್ಣಿನಿಂದ ತಯಾರಿಸಿ ವಿವಿಧ ಖಾದ್ಯಗಳನ್ನು ಗ್ರಾಹಕರು ಸೇವಿಸಿ ಮನತಣಿಸಿಕೊಂಡರು.

ಮೇಳದಲ್ಲಿ ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ಕ್ರೀಂ., ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆಗಳು ಜತೆಗೆ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಆಗ್ರಿ ಬ್ಯುಸಿನೆಸ್ ಮಳಿಗೆಗಳನ್ನು ಜೋಡಿಸಲಾಗಿತ್ತು. ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ. ಹೀಗೆ ಹಲಸು ಮೇಳದಲ್ಲಿ ಏನಿಲ್ಲ ಎಲ್ಲವೂ ಇತ್ತು.
ಬೆಳಗ್ಗೆ ಹಲಸು ಹಣ್ಣು ಮೇಳದ ಮಳಿಗೆಗಳಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್, ಕೃಷಿಕ ಮಣಿಲ ಮಹದೇವ ಶಾಸ್ತ್ರಿ ಉಪಸ್ಥಿತರಿದ್ದರು.
ಸಂಜೆ ೪ ಗಂಟೆಗೆ ಮೇಳಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ೫ ರಿಂದ ಹಲಸು ಹಣ್ಣುಗಳ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.
ನವತೇಜದ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ, ಕಾರ್ಯದರ್ಶಿ ಸುಹಾಸ್ ಮರಿಕೆ, ನವನೀತ ಸಂಸ್ಥೆಯ ವೇಣುಗೋಪಾಲ್ ಶಿಬರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
























