ಉಪ್ಪಿನಂಗಡಿ ಪಾತಾಳ ಯಕ್ಷಪ್ರತಿಷ್ಠಾನದ ಕಲಾಮಂಗಳ ಪ್ರಶಸ್ತಿ ಪ್ರದಾನ ಸಮಾರಂಭವು ಪಾತಾಳದ ಪೂರ್ಣ ಶ್ರೀ ಗೃಹದಲ್ಲಿ ಜರಗಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಉದ್ಯಮಿ, ಕಲಾಪೋಷಕ ಶ್ರೀಪತಿ ಭಟ್ ಮೂಡಬಿದ್ರೆ, ಜನಾರ್ಧನ ಹಂದೆ ಮಂಗಳೂರು ಮುಖ್ಯ ಅಭ್ಯಾಗತರಾಗಿ ಶುಭ ಹಾರೈಸಿದರು.
ಅಶ್ವತ್ಥಾಮ ಖ್ಯಾತಿಯ ಕಲಾವಿದ ಗುಂಡಿ ಮಜಲು ಗೋಪಾಲಕೃಷ್ಣ ಭಟ್ ಮತ್ತು ಕಟೀಲು ಮೇಳದ ಕಲಾವಿದ, ಅರ್ಥದಾರಿ ವಾಟೆಪಡ್ಪು ವಿಷ್ಣು ಶರ್ಮ ಇವರಿಗೆ ಕಲಾಮಂಗಲ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅರ್ತಿಲ ಕೃಷ್ಣಪ್ಪ ಗೌಡ, ವೆಂಕಪ್ಪ ಮಡಿವಾಳ ಮತ್ತು ವಿಮಲ ಮಡಿವಾಳ್ತಿ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತಾಡಿ ಪಾತಾಳ ವೆಂಕಟರಮಣ ಭಟ್ಟರು ಸ್ತ್ರೀ ವೇಷಧಾರಿಯಾಗಿ ರಂಗದಲ್ಲಿ ತಂದ ಆವಿಷ್ಕಾರಗಳು ಒಂದು ಅಪೂರ್ವ ಸಾಧನೆ ಎಂದು ತಿಳಿಸಿ ಕಲಾವಿದರನ್ನು ಗೌರವಿಸುವ ಮೂಲಕ ಕಲೆಯನ್ನು ಪೋಷಿಸುವ ಕೆಲಸ ನಿರಂತರವಾಗಿ ನಡೆಯಲಿ ಎಂದು ತಿಳಿಸಿದರು.
ಕಲಾವಿದ, ಸಂಘಟಕ ಅಶೋಕ್ ಭಟ್ ಉಜಿರೆ ಅಭಿನಂದನಾ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಸಂಯೋಜಿಸಿದ ಕಲಾವಿದ ಪಾತಾಳ ಅಂಬಾ ಪ್ರಸಾದ ಕುಟುಂಬಸ್ಥರು, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಧಾರ್ಮಿಕ ದತ್ತಿ ಇಲಾಖೆ ಪರಿವೀಕ್ಷಕ ಶ್ರೀಧರ ಯಸ್. ಪಿ, ಹಿರೇಬಂಡಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಧರ್ ಭಟ್. ಕೆ ಮತ್ತು ಕಲಾಸಕ್ತರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಭಾಗವತ ಕಾವ್ಯಶ್ರೀ ಆಜೇರು, ಚಂದ್ರಶೇಖರ ಗುರುವಾಯನಕೆರೆ ಶ್ರೀಪತಿ ನಾಯಕ್ ಆಜೇರು ಹಿಮ್ಮೇಳದಲ್ಲಿ ಗಣರಾಜ ಕುಂಬಳೆ, ಉಜಿರೆ ಅಶೋಕ್ ಭಟ್, ಗುಂಡಿ ಮಜಲು ಗೋಪಾಲಕೃಷ್ಣ ಭಟ್, ವಿಷ್ಣು ಶರ್ಮ,ಡಾ. ಗೋವಿಂದಪ್ರಸಾದ ಕಜೆ, ರಮೇಶ್ ಭಟ್ ಕಜೆ, ಹರಿಕಿರಣ್ ಕೊಯ್ಲ, ಶ್ರುತಿ ವಿಸ್ಮಿತ್ ಕಲಾವಿದರಿಂದ ಸೀತಾ ಪರಿತ್ಯಾಗ ಯಕ್ಷಗಾನ ಬಯಲಾಟ ಜರಗಿತು.
























