ತೆಕ್ಕಾರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪ
ಉಪ್ಪಿನಂಗಡಿ: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಕುರಿತು ಎಫ್ಐಆರ್ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ಶನಿವಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದು, ಇದರ ಧಾರ್ಮಿಕ ಸಭೆಯಲ್ಲಿ ಹರೀಶ್ ಪೂಂಜ ಮುಸ್ಲಿಮರನ್ನು ತೆಗಳಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಹರೀಶ್ ಪೂಂಜ ಮಾಡಿದ ಪ್ರಚೋದನಕಾರಿ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತೆಕ್ಕಾರಿನ ಮುಸ್ಲಿಮರು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಟ್ಯೂಬ್‌ಲೈಟನ್ನು ಒಡೆದು ಹಾಕುತ್ತಾರೆ, ಡೀಸೆಲ್ ಕದಿಯುತ್ತಿದ್ದಾರೆ ಎಂದು ಅವಹೇಳನಕಾರಿ ಮತ್ತು ಕೋಮು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನೀವು (ಹಿಂದುಗಳು) ಈ ತೆಕ್ಕಾರಿನಲ್ಲಿ ಇರುವುದು 150 ಮನೆಗಳು. 1,200 ಕುಟುಂಬಗಳಿರುವುದು ಮುಸ್ಲಿಮರದ್ದು. ಇನ್ನು ಒಂದು ಹತ್ತು ವರ್ಷ ಕಳೆದರೆ 1,200 ಇರುವ ಮುಸ್ಲಿಮರ ಸಂಖ್ಯೆ 600ಕ್ಕೆ ಇಳಿಯುವುದಿಲ್ಲ, ಬದಲಿಗೆ ತೆಕ್ಕಾರಿನ ಮುಸ್ಲಿಮರ ಸಂಖ್ಯೆ 5,000ದಿಂದ 10,000 ಆಗುತ್ತದೆ. ಅವರ ಸಂಖ್ಯೆ ಎಷ್ಟೇ ಆದರೂ ನಾವು ಒಗ್ಗಟ್ಟಿನಿಂದ ಜಾತಿಗಳ ವಿಚಾರ ದೂರ ಇಟ್ಟು ದೇವಸ್ಥಾನವನ್ನು ಬೆಳೆಸಬೇಕಾಗಿದೆ ಎಂದು ಶಾಸಕರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ತೆಕ್ಕಾರು ಗ್ರಾಮದ ನಿವಾಸಿ ಇಬ್ರಾಹಿಂ ಎಸ್.ಬಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಬಿಎನ್ಎಸ್ಎಸ್ ಕಾಯ್ದೆ 196, 352(2) ಅಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲಾಗಿದೆ.
























