ರಾಜಕೀಯ ಪ್ರೇರಿತ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪ
ಬೆಂಗಳೂರು : ಕಾಂಗ್ರೆಸ್ ಶಾಸಕರ ಆಪ್ತನ ಕಿರುಕುಳದಿಂದ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬೆಂಗಳೂರಿನ ನಾಗವಾರದ ಕಚೇರಿಯಲ್ಲೇ ವಿನಯ್ ಸೋಮಯ್ಯ(35) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್ನೋಟ್ ಪೋಸ್ಟ್ ಮಾಡಿದ್ದ ವಿನಯ್, ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು.
ವಿನಯ್ ವಾಟ್ಸ್ಆ್ಯಪ್ ಗ್ರೂಪ್ ಒಂದರ ಅಡ್ಮಿನ್ ಆಗಿದ್ದರು. ಆ ಗ್ರೂಪ್ನಲ್ಲಿ ಇತ್ತೀಚೆಗೆ ಕಾಂಗ್ರೆಸ್ ಶಾಸಕರೊಬ್ಬರ ಬಗ್ಗೆ ಅಪಹಾಸ್ಯ ಪೋಸ್ಟ್ ಮಾಡಿರುವ ಆರೋಪ ಕೇಳಿಬಂದಿತ್ತು. ಕಾಂಗ್ರೆಸ್ ಮುಖಂಡ ನೀಡಿದ ದೂರು ಆಧರಿಸಿ ವಿನಯ್ ವಿರುದ್ಧ ಮಡಿಕೇರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ವಿನಯ್ ನಿರೀಕ್ಷಣಾ ಜಾಮೀನು ಕೂಡ ಪಡೆದಿದ್ದರು.
ನಿನ್ನೆ ರಾತ್ರಿ ಮಾಡಿದ ಪೋಸ್ಟ್‌ನಲ್ಲಿ ನನ್ನ ಆತ್ಮಹತ್ಯೆಗೆ ವಿರಾಜಪೇಟೆ ಶಾಸಕ ಪೊನ್ನಣ್ಣ ಆಪ್ತ ತೆನ್ನೀರಾ ಮಹೀನಾ ಕಾರಣ ಎಂದು ವಿನಯ್ ಬರೆದಿದ್ದಾರೆ. ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ್ದಾರೆ. ನನ್ನ ಮೇಲೆ ಎಫ್‌ಐಆರ್ ದಾಖಲಿಸಿ ಕಿಡಿಗೇಡಿ ಎಂದು ಕೊಡಗು ಜಿಲ್ಲೆಯಲ್ಲಿ ನನ್ನ ಬಗ್ಗೆ ತೆನ್ನೀರಾ ಅಪಪ್ರಚಾರ ಮಾಡಿದ್ದಾನೆ. ತೆನ್ನೀರಾ ಈ ಹಿಂದೆಯೂ ಹಲವರ ಆತ್ಮಹತ್ಯೆಗೆ ಕಾರಣವಾಗಿದ್ದಾನೆ.
ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ದಾಖಿಲಿಸಿದರು. ಜಾಮೀನು ಸಿಕ್ಕಿದ್ದರೂ ನನ್ನ ಸ್ನೇಹಿತನ ಮನೆಗೆ ಹೋಗಿ ಪೊಲೀಸರು ವಿಚಾರಿಸಿದ್ದಾರೆ. ವಿರಾಜಪೇಟೆ ಶಾಸಕ ಪೊನ್ನಣ್ಣ ಆದೇಶದಂತೆ ಇದೆಲ್ಲಾ ಮಾಡಿದ್ದಾರೆ. ಯಾರೋ ಹಾಕಿದ ಫೋಟೊಗೆ ನಮ್ಮ ಮೇಲೆ ಎಫ್‌ಐಆರ್ ಮಾಡಿದ್ದಾರೆ. ನಮ್ಮ ಮೇಲೆ ರೌಡಿಶೀಟ್ ಓಪನ್ ಮಾಡುವ ಹುನ್ನಾರ ನಡೆದಿದೆ. ಇವರಿಗೆ ಸರಿಯಾದ ಶಿಕ್ಷೆಯಾದರೆ ನನ್ನ ಸಾವಿಗೆ ನ್ಯಾಯ ಸಿಗುತ್ತೆ ಎಂದು ವಿನಯ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಜಿ.ಪರಮೇಶ್ವರ್, ಘಟನೆ ಸಂಬಂಧ ಡಿಸಿಪಿ ತನಿಖೆ ಮಾಡುತ್ತಾರೆ. ವರದಿಯಲ್ಲಿ ಏನು ಬರುತ್ತೋ ಅದರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯ ಇರುವುದಿಲ್ಲ. ಪರಿಶೀಲನೆ ನಡೆಸಿ ಸತ್ಯಾಂಶ ಇದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅಂಥದ್ದೇನಾದರೂ ಯಾರದ್ದಾದ್ರು ಪ್ರಭಾವ ಇದ್ದರೆ ಪರಿಶೀಲಿಸುತ್ತೇವೆ. ಎಫ್‌ಐಆರ್ ಆದ ತಕ್ಷಣ ಪೊಲಿಸರು ತನಿಖೆ ಆರಂಭಿಸುತ್ತಾರೆ. ತನಿಖೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ತಾರೆ ಎಂದು ತಿಳಿಸಿದ್ದಾರೆ.
























