ಪುತ್ತೂರು: ಬನ್ನೂರಿನ ಅಲಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಮುಖ್ಯೋಪಾಧ್ಯಾಯರಾಗಿ ಅಮರನಾಥ್ ಪಟ್ಟೆ ಅಧಿಕಾರ ಸ್ವೀಕರಿಸಿದರು. ಇಂದು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ನೂತನ ಮುಖ್ಯೋಪಾಧ್ಯಾಯರಿಗೆ ನೇಮಕಾತಿ ಆದೇಶ ಪತ್ರ ಮತ್ತು ಶಾಲಾ ಕಡತಗಳನ್ನು ನೀಡಿ ಶಾಲು ಹೊದಿಸಿ ಶುಭ ಹಾರೈಸಿದರು.

ಸಂಚಾಲಕರಾದ ಎ.ವಿ. ನಾರಾಯಣ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ನೂತನ ಪ್ರಾಂಶುಪಾಲರನ್ನು ಪರಿಚಯಿಸಿದರು. ನಿರ್ದೇಶಕರಾದ ಸೀತಾರಾಮ ಕೇವಳ ಮಾತನಾಡಿ ನೂತನ ಪ್ರಾಂಶುಪಾಲರಿಗೆ ಶುಭ ಹಾರೈಸಿದರು. ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಅವರು ಶುಭ ಹಾರೈಸಿ ಶಾಲಾ ನಿಯಮಗಳನ್ನು ವಿಶದಪಡಿಸಿದರು.

ಉಪಾಧ್ಯಕ್ಷರಾದ ಉಮೇಶ್ ಮಳುವೇಲು, ನಿರ್ದೇಶಕರುಗಳಾದ ಪುಷ್ಪಾವತಿ ಕಳುವಾಜೆ, ಪ್ರತಿಭಾದೇವಿ ನಾರಾಯಣ , ಉಪ ಪ್ರಾಂಶುಪಾಲೆ ಸವಿತಾ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿ ಶಿಕ್ಷಕಿ ಯಶುಭಾ ರೈ ವಂದಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಮರನಾಥ ಪಟ್ಟೆ
ಬನ್ನೂರು ಗ್ರಾಮದ ಪಟ್ಟೆ ಮನೆತನದ ಅಮರನಾಥ ಅವರು ಎಂ.ಎಸ್ಸಿ. (ರಸಾಯನ ಶಾಸ್ತ್ರ), ಬಿ.ಎಡ್. ಪದವೀಧರರಾಗಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸುಮಾರು 30 ವರ್ಷಗಳ ಬೋಧನೆ ಮತ್ತು ಆಡಳಿತ ಅನುಭವ ಹೊಂದಿದ್ದಾರೆ. ಇವರು ಗಣಿತ ಮತ್ತು ವಿಜ್ಞಾನ ವಿಷಯಗಳ ಪರಿಣತರಾಗಿದ್ದಾರೆ.
























