ಪುತ್ತೂರು: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಾರ್ಗದರ್ಶನದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮುಂಡೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಗೌಡ ಸ್ವಸಹಾಯ ಟ್ರಸ್ಟ್ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ-2025 ಭಾನುವಾರ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾ ಸಂಭ್ರಮದ ಅಂಗವಾಗಿ ಬೆಳಗ್ಗೆ ಮುಕ್ವೆ ಮಹಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಿಂದ ವಾಹನ ಜಾಥಾದೊಂದಿಗೆ ಕ್ರೀಡಾಜ್ಯೋತಿ ವಿದ್ಯಾಸಂಸ್ಥೆ ತನಕ ಆಗಮಿಸಿದ ಬಳಿಕ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಕ್ರೀಡಾಂಗಣ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ಸಂಘಟನೆ ಎಂದಾಕ್ಷಣ ಒಂದಾಗುವುದು ಅಲ್ಲ. ಪರಿವರ್ತನೆ ಹಾದಿಯನ್ನು ಕಾಣಬೇಕು, ವ್ಯಕ್ತಿಗತ, ಮಾನಸಿಕ, ವಿಕಸನ ಪರಿವರ್ತನೆ ಕಾಣಬೇಕು. ಅದರಲ್ಲೂ ಮಾನಸಿಕ, ದೈಹಿಕ ಪರಿವರ್ತನೆಗೆ ಕ್ರೀಡೆ ಸಹಕಾರಿ. ಹೇಗೆ ದೀಪ ತನ್ನನ್ನು ತಾನು ಬೆಳೆಗಿಸುತ್ತದೋ ಹಾಗೆಯೇ ವ್ಯಕ್ತಿಯಲ್ಲಿರುವ ಪ್ರತಿಭೆ ಬೆಳೆಯಲು ಇಂತಹಾ ವೇದಿಕೆ ಅಗತ್ಯ. ನಮ್ಮ ಮಕ್ಕಳಲ್ಲಿರುವ ಕ್ರೀಡಾ ಮನೋಭಾವ ಬೆಳೆಸುವ ಕಾರ್ಯ ಸಮಾಜ ಮಾಡಿದ್ದೇ ಆದರೆ ಆತನ ಕೀರ್ತಿ ದೇಶದುದ್ದಗಲಕ್ಕೂ ಪಸರಿಸುವುದಲ್ಲದೆ ಆತನ ಸಮಾಜವೂ ಗುರುತಿಸುವಂತಾಗುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಗೌಡ ಸಮಾಜ ಇತರ ಸಮಾಜಕ್ಕಿಂತ ಬಿನ್ನ. ಗೌಡರ ಗೌಜಿ ಗಮ್ಮತ್ತು ಇಂದು ಮುಂಡೂರು ವಲಯದಲ್ಲಿ ನಡೆದಿದೆ. ಕ್ರೀಡೆಯ ಮೂಲಕ ಸಂಭ್ರಮಿಸುವ ಕೆಲಸ ಆಗುತ್ತಿದೆ. ಯುವಶಕ್ತಿಯನ್ನು ರಾಷ್ಟ್ರ ಶಕ್ತಿಯನ್ನಾಗಿಸುವ ಶಕ್ತಿ ಕ್ರೀಡೆಗಿದೆ. ಈ ನಿಟ್ಟಿನಲ್ಲಿ ಸಮಾಜದ ಯುವಕ-ಯುವತಿಯರು ಶಿಕ್ಷಣದ ಜತೆ ಕ್ರೀಡಾ ಸಾಧನೆ ಮಾಡಿ ದೇಶಕ್ಕೆ ನೀಡಬೇಕಾದ ಕೊಡುಗೆಯ ಕುರಿತು ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.
ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಮಾತನಾಡಿ, ಸಮಾಜ ಬಲಿಷ್ಠ ಆದರೆ ಸಂಪತ್ತಾಗಿ ಬೆಳೆಯುತ್ತದೆ. ಅದನ್ನು ಸಮಾಜಕ್ಕೆ ವಿನಿಯೋಗಿಸಿದರೆ ಅದು ದೇಶದ ಸಂಪತ್ತಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಆದರೆ ಸಮಾಜ ಕಟ್ಟುವಲ್ಲಿ ಎಡವಿದಂತಾಗಿದೆ. ಈ ನಿಟ್ಟಿನಲ್ಲಿ ಯುವ ನಾಯಕರುಗಳನ್ನು ಬೆಳೆಸುವ ಮೂಲಕ ಸಂಘಟನೆಯೂ ಬೆಳೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಯುವಕ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ಬೆಂಗಳೂರಿನ ಉದ್ಯಮಿ ನಳಿನಿ ಲೋಕಪ್ಪ ಗೌಡ, ಮುಂಡೂರು ವಲಯ ಅಧ್ಯಕ್ಷ ಚೆನ್ನಪ್ಪ ಗೌಡ, ಕ್ರೀಡಾ ಸಂಚಾಲಕ ಮೋಹನ್ ಗೌಡ ನಡುಬೈಲು, ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಬೆಳ್ಯಪ್ಪ ಗೌಡ ಪಾಲ್ಗೊಂಡಿದ್ದರು.
ಕುಮಾರಿ ಅನ್ವಿತಾ ಪ್ರಾರ್ಥನೆ ಹಾಡಿದರು. ಮುಂಡೂರು ವಲಯ ಉಸ್ತುವಾರಿ ರಮೇಶ್ ಗೌಡ ಪಜಿಮಣ್ಣು ಸ್ವಾಗತಿಸಿದರು. ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕ್ರೀಡಾ ಸಂಭ್ರಮದಲ್ಲಿ ಪುರುಷರಿಗೆ, ಮಹಿಳೆಯರಿಗೆ, 17ರ ವಯೋಮಾನದ ಹುಡುಗರಿಗೆ, ಹುಡುಗಿಯರಿಗೆ, 14 ರ ವಯೋಮಾನದ ಹುಡುಗ ಹಾಗೂ ಹುಡುಗಿಯರಿಗೆ, 50 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಹೀಗೆ 7 ವಿಭಾಗಗಳಲ್ಲಿ ವಿವಿಧ ಕ್ರೀಡಾಕೂಟ ನಡೆಯಿತು.
























