ಹೊಸವರ್ಷವನ್ನು ದೇವರ ದರ್ಶನ ಪಡೆದು ಪ್ರಾರಂಭಿಸುವ ಪರಂಪರೆ
ಮಂಗಳೂರು : ಹೊಸ ವರ್ಷದ ಆಗಮನ ಸಂದರ್ಭದಲ್ಲಿ ಕರಾವಳಿಯ ಪ್ರಮುಖ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಧರ್ಮಸ್ಥಳ, ಕಟೀಲು, ಸುಬ್ರಹ್ಮಣ್ಯ , ಕದ್ರಿ, ಉಡುಪಿ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ರಾತ್ರಿ ತನಕ ಭಕ್ತರ ವಿಪರೀತ ಸಂಣಿಯಿತ್ತು. ಜನರು ಹೊಸವರ್ಷವನ್ನು ಪಬ್, ಬಾರ್, ಹೋಟೆಲ್ಗಳಲ್ಲಿ ಮೋಜು ಮುಸ್ತಿ ಮಾಡಿ ಸ್ವಾಗತಿಸುವ ಪರಂಪರೆ ಬಿಟ್ಟು ದೇವಸ್ಥಾನಗಳಿಗೆ ಹೋಗಲಾರಂಭಿಸಿದ್ದಾರೆ. ದೇಗುಲಗಳಿಗೆ ಆಗಮಿಸಿ ದೇವರ ದರ್ಶನ ಪಡೆದು ಹೊಸ ವರ್ಷದ ದಿನಾರಂಭ ಮಾಡುತ್ತಿದ್ದಾರೆ.
ಧರ್ಮಸ್ಥಳ ಸೇರಿದಂತೆ ಕರಾವಳಿಯ ದೇವಸ್ಥಾನಗಳಲ್ಲಿ ಕಳೆದ ಕೆಲವು ದಿನಗಳಿಂದ ಭಕ್ತರ ಸಂದಣಿ ಹೆಚ್ಚಿದೆ. ವರ್ಷಾಂತ್ಯ, ಕ್ರಿಸ್ಮಸ್ ಮತ್ತಿತರ ಕಾರಣಗಳಿಗೆ ರಜೆಯಿದ್ದ ಕಾರಣ ನಾಡಿನ ಎಲ್ಲೆಡೆಯಿಂದ ಕರಾವಳಿಯ ಪುಣ್ಯಕ್ಷೇತ್ರಗಳಿಗೆ ಆಗಮಿಸಿದ್ದಾರೆ. ಆದರೆ ಡಿ.31ರಂದು ಈ ಪರಿಯ ಭಕ್ತಸಂದಣಿಯಿದ್ದದ್ದು ಬಹಳ ಅಪರೂದ ವಿದ್ಯಮಾನ ಎನ್ನಲಾಗಿದೆ.
ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಉಡುಪಿ ದೇವಸ್ಥಾನಗಳಲ್ಲೂ ಭಕ್ತರ ದಂಡು ಇತ್ತು. ದೇವಸ್ಥಾನದ ಮುಂಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದು, ದೇವರ ದರ್ಶನಕ್ಕೆ ಮೈಲುದ್ದದ ಕ್ಯೂ ಇತ್ತು.
ಕರಾವಳಿಯ ದೇವಸ್ಥಾನಗಳು ಮಾತ್ರವಲ್ಲದೆ ಮೈಸೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳ ದೇಗುಲಗಳಲ್ಲಿ ಬೆಳಗ್ಗೆ ಭಕ್ತ ಸಮೂಹ ದೇವರ ದರ್ಶನಕ್ಕೆ ಆಗಮಿಸಿದೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೂಡ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಮಾದಪ್ಪನಿಗೆ ಸಹಸ್ರಾರು ಭಕ್ತರಿಂದ ಪೂಜೆ ಸಲ್ಲಿಕೆಯಾಗಿದೆ. ಮಲೆ ಮಹದೇಶ್ವರನಿಗೆ ಸಾವಿರಾರು ಭಕ್ತರು ಚಿನ್ನದ ರಥ, ಬೆಳ್ಳಿ ರಥ, ಬಸವ ವಾಹನ, ರುದ್ರಾಕ್ಷಿ ಮಂಟಪ ಮತ್ತಿತರ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳವಾರದಿಂದಲೇ ಅಪಾರ ಸಂಖ್ಯೆಯ ಭಕ್ತರು ಬೆಟ್ಟದಲ್ಲಿ ಬೀಡುಬಿಟ್ಟಿದ್ದಾರೆ.
























