ಜನವರಿ 18, ಫೆಬ್ರವರಿ 15ರಂದು ವಿಶೇಷ ರೈಲು
ಮಂಗಳೂರು : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜ.14ರಿಂದ ಪ್ರಾರಂಭವಾಗಲಿರುವ ಮಹಾಕುಂಭಮೇಳಕ್ಕೆ ಮಂಗಳೂರಿನಿಂದಲೂ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಮಹಾಕುಂಭಮೇಳಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ದೇಶದ ಮೂಲೆ ಮೂಲೆಯಿಂದ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಪ್ರಯಾಗ್‌ರಾಜ್, ವಾರಣಾಸಿಗೆ ವಿಶೇಷ ರೈಲುಗಳು ಸಂಪರ್ಕ ಕಲ್ಪಿಸಲಿವೆ. ಮಂಗಳೂರಿನಿಂದ ಕೂಡ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಮಂಗಳೂರು ಸೆಂಟ್ರಲ್‌ನಿಂದ ವಾರಣಾಸಿಗೆ ವಿಶೇಷ ರೈಲು ಸಂಚರಿಸಲಿದೆ.
ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು ಜನವರಿ 18 ಮತ್ತು ಫೆಬ್ರವರಿ 15ರಂದು ಎರಡು ದಿನ ಸಂಚರಿಸಲಿದೆ. ರೈಲು ಸಂಖ್ಯೆ 06019 ಮಂಗಳೂರು ಸೆಂಟ್ರಲ್ – ವಾರಣಾಸಿ ಸಾಪ್ತಾಹಿಕ ವಿಶೇಷ ರೈಲು ಮಂಗಳೂರಿನಿಂದ ಬೆಳಗಿನ ಜಾವ 4.15ಕ್ಕೆ ಹೊರಟು ಮೂರನೇ ದಿನ ಮಧ್ಯಾಹ್ನ 2.50ಕ್ಕೆ ವಾರಣಾಸಿ ತಲುಪಲಿದೆ. ರೈಲು ಸಂಖ್ಯೆ 06020 ವಾರಣಾಸಿ – ಮಂಗಳೂರು ಸೆಂಟ್ರಲ್ ಸಾಪ್ತಾಹಿಕ ವಿಶೇಷ ರೈಲು ಜನವರಿ 21 ಮತ್ತು ಫೆಬ್ರವರಿ 18 ರಂದು ವಾರಣಾಸಿಯಿಂದ ಸಂಜೆ 6.20ಕ್ಕೆ ಹೊರಟು ನಾಲ್ಕನೇ ದಿನ ಮಧ್ಯಾಹ್ನ 2.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ತಿರುವೊಟ್ಟಿಯೂರ್, ಪೆರಂಬೂರ್, ಕಟ್ಪಾಡಿ ಮತ್ತು ಜೋಲಾರ್‌ಪೆಟ್ಟೈನಲ್ಲಿ ಈ ರೈಲಿಗೆ ನಿಲುಗಡೆ ಇತ್ತದೆ. ವಿಶೇಷ ರೈಲುಗಳಿಗೆ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ 2025ರ ಜನವರಿ 14 ರಿಂದ ಆರಂಭವಾಗಲಿದ್ದು 44 ದಿನಗಳ ಕಾಲ ನಡೆಯಲಿದೆ. ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 40 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
























