ಮಠದ ಸಿಬ್ಬಂದಿ, ದಿವಾನ, ಕಾನ್ಸ್ಟೆಬಲ್ ಮೇಲೆ ಹಲ್ಲೆಗೆ ಯತ್ನ
ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಬಂದು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಎಂಟು ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಬಂಧಿಸಲಾಗಿದೆ. ಡಿ.29ರಂದು ರಾತ್ರಿ ಈ ಘಟನೆ ನಡೆದಿದ್ದು, ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್ ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಬಂಧಿತರು.
ಶ್ರೀಕೃಷ್ಣ ಮಠದ ಒಳಗೆ ಹಾಗೂ ಹೊರಗೆ ತೀವ್ರ ಜನಸಂದಣಿಯಿಂದ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ದೇವರ ದರ್ಶನಕ್ಕೆಂದು ಬಂದಿದ್ದ 7-8 ಜನ ಅಯ್ಯಪ್ಪ ಮಾಲಾಧಾರಿಗಳು ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ರಥಬೀದಿಯಲ್ಲಿ ನಡೆಯುವ ರಥೋತ್ಸವದ ದೇವರ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಕೃಷ್ಣಮಠದ ಮುಂಭಾಗದಿಂದ ಒಳಭಾಗಕ್ಕೆ ಬರುವ ವೇಳೆ ದಾಂಧಲೆ ನಡೆಸಿ ಕೃಷ್ಣ ಮಠದ ಸಿಬ್ಬಂದಿ ಜಗದೀಶ ಎಂಬವರಿಗೆ ಹಲ್ಲೆ ಮಾಡಿದ್ದಾರೆ.
ಜಗದೀಶ ಅವರನ್ನು ಮೇಲೆತ್ತಿಕೊಂಡು ಶ್ರೀಕೃಷ್ಣ ಮಠದ ಗರ್ಭಗುಡಿಯ ಒಳಗಡೆ ಬಂದಿದ್ದು, ಆಗ ಮಠದ ದಿವಾನ ನಾಗರಾಜ ಆಚಾರ್ಯ ಅಯ್ಯಪ್ಪ ಮಾಲಾಧಾರಿಗಳನ್ನು ತಡೆಯಲು ಪ್ರಯತ್ನಿಸಿದರು. ಆಗ ಅವರೆಲ್ಲ ನಾಗರಾಜ ಆಚಾರ್ಯರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೃಷ್ಣ ಮಠದ ಭದ್ರತಾ ಕರ್ತವ್ಯ ಹಾಗೂ ಪಿಆರ್ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೆಬಲ್ ರವೀಂದ್ರ ಗಲಾಟೆ ಮಾಡದಂತೆ ಅಯ್ಯಪ್ಪ ಮಾಲಾಧಾರಿಗಳನ್ನು ಸಮಾಧಾನಪಡಿಸಿ ತಡೆಯಲು ಹೋಗಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳು ಪೊಲೀಸ್ ಸಿಬ್ಬಂದಿಗೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾನ್ಸ್ಟೆಬಲ್ ರವೀಂದ್ರ ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ, ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
























