ಜಾನಪದ-ಶಾಸ್ತ್ರೀಯದ ಸ್ಪಂದನ, ಸಾಹಸ-ಹೆಜ್ಜೆಗಳ ಸಮ್ಮಿಲನ
ವಿದ್ಯಾಗಿರಿ (ಮೂಡುಬಿದಿರೆ): ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಭಕ್ತಿಗಾನ ಸುಧೆಯಲ್ಲಿ ಮಿಂದ ಪ್ರೇಕ್ಷಕರನ್ನು ನರ್ತನ ಲೋಕಕ್ಕೆ ಕೊಂಡೊಯ್ದದ್ದು ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ. ಉತ್ತರದ ಹಿಂದೂಸ್ಥಾನಿಗೆ ಶ್ರೋತೃಗಳಾಗಿದ್ದ ವಿರಾಸತ್ ಪ್ರೇಕ್ಷಕರು ಪಶ್ಚಿಮದ ಜಾನಪದಕ್ಕೆ ವೀಕ್ಷಕರಾದರು.
ದೇಶದ ಪಶ್ಚಿಮ ತೀರದ ಗುಜರಾತ್‌ನಲ್ಲಿ ನವರಾತ್ರಿಯ ಸಂದರ್ಭದಲ್ಲಿ ದೇವಿ ಆರಾಧನೆ ಮಾಡುತ್ತಾ ನರ್ತಿಸುವ ಜಾನಪದ ನೃತ್ಯವೇ ಗರ್ಭಾ. ಗುಜರಾತ್‌ನ ರಂಗ್ ಮಲಹರ್ ತಂಡ ಸದಸ್ಯರು ಸಾಂಪ್ರದಾಯಿಕ ವಸ್ತ್ರ ತೊಟ್ಟು ಹೆಜ್ಜೆ ಹಾಕಿದಾಗ, ಅಪ್ಸರೆಯರು ಧರೆಗಿಳಿದು ನರ್ತಿಸಿದ ಚಿತ್ರಣ ರೂಪುಗೊಂಡಿತು. ‘ರಂಗ್ ಧಾರಿ ಚೂಡೆ… ಹಾಡಿಗೆ ಹೆಣ್ಣುಮಕ್ಕಳು ಹೆಜ್ಜೆ ಹಾಕುತ್ತಾ ಗುಜರಾತಿನ ಸಾಂಸ್ಕೃತಿಕ ಸಿಂಚನ ಉಣಬಡಿಸಿದರು. ಅವರ ನರ್ತನಕ್ಕೆ ವರ್ಣಮಯ ಲೋಕವೇ ಸೃಷ್ಟಿಯಾಗಿತ್ತು. ಛತ್ರಿ ಹಾಗೂ ಕೋಲಾಟ ಮಿಶ್ರಣದ ನೃತ್ಯ ಮನ ಸೆಳೆಯಿತು.

ಜೀವ, ಏಕತೆ, ಸಂತೋಷ ಸಾರುವ ‘ ಪರ್‌ದೇಶಿ ರಾಧಾನೇ… ಏ ರಂಗ್ ರಸಿಯಾ..’ ಹಾಡಿಗೆ ಕೋಲಾಟ ಮಾಡಿದರು. ಮಳೆಗೆ ಮುನ್ನ ಮೇವು ಸಂಗ್ರಹಿಸುವ ಹಳ್ಳಿಗರ ಸಂಭ್ರಮದ ಬೇಟೆ, ಬೆಟ್ಟದ ನೃತ್ಯವು ಬುಡಕಟ್ಟು ಜನರ ಜೀವನ ಬಿಂಬಿಸಿತು. ಶ್ರಾವ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಗುಜರಾತಿನ ಜಾನಪದ ನೃತ್ಯದ ಬೆನ್ನಲ್ಲೇ ಅಬ್ಬರಿಸಿದ್ದು, ಆಳ್ವಾಸ್ ಸಾಂಸ್ಕೃತಿಕ ವೈಭವದ ಝಲಕ್. ಪಶ್ಚಿಮ ಭಾರತದಿಂದ ಪ್ರೇಕ್ಷಕ ಸಮೂಹವನ್ನು ದಕ್ಷಿಣದ ಸಿಂಗಾರಿ ಮೇಳದೆಡೆಗೆ ವಿರಾಸತ್ ಕೊಂಡೊಯ್ಯಿತು. ಕೇರಳ ಹಾಗೂ ಕರ್ನಾಟಕದ ಕರಾವಳಿಯ ದೇವ, ದೈವ, ಸಾಂಸ್ಕೃತಿಕ ಆರಾಧನೆಯ ಅವಿಭಾಜ್ಯ ಅಂಗವಾದ ‘ಚೆಂಡೆ’ಯ ನಿನಾದಕ್ಕೆ ಉನ್ಮಾದಗೊಳ್ಳದ ಕಲಾಸಕ್ತರಿಲ್ಲ. ಭಕ್ತರು, ಕಲಾಸಕ್ತರು ಸೇರಿದಂತೆ ಕುಳಿತವರಿಗೆಲ್ಲ ಝಲ್ ಎನಿಸುವಂತೆ ಮಾಡುವ ಚೆಂಡೆಯ ನಾದ ವಿರಾಸತ್ ವೇದಿಕೆಯಲ್ಲಿ ಹೊಮ್ಮಿದಾಗ ಪ್ರೇಕ್ಷಕರಿಗೂ ರೋಮಾಂಚನ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ ಸಾಂಸ್ಕೃತಿಕ ವಿದ್ಯಾರ್ಥಿಗಳೇ ಕೇರಳದ ಚೆಂಡೆ ನುಡಿಸಿ, ಜನಮನ ಗೆದ್ದರು. ಚೆಂಡೆಯ ನಿನಾದ ಪ್ರೇಕ್ಷಕರನ್ನು ಮುದಗೊಳಿಸಿತು.

ಮಣಿಪುರದ ಮೈತೇಯಿ ಜನರ ಲಯ ಹಾಗೂ ಕೌಶಲಗಳ ಸಮ್ಮಿಳಿತದ ಆರಾಧನಾ ಕಲೆಯೇ ‘ಸ್ಟಿಕ್ ಡಾನ್ಸ್’ ಎಂದು ಜನಜನಿತ. ಭಾರತೀಯ ಮಾರ್ಷಲ್ ಕಲಾ ಮಾದರಿಯ ಮಣಿಪುರಿ ‘ಸ್ಟಿಕ್ ಡಾನ್ಸ್’ ಈಶಾನ್ಯ ಭಾರತದ ಸಾಹಸದ ದರ್ಶನ ನೀಡಿತು. ಸಾಹಸ ಮತ್ತು ಏಕಾಗ್ರತೆಯ ಸಂಗಮದಂತೆ ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳು ‘ಸ್ಟಿಕ್ ಡಾನ್ಸ್’ ಅನ್ನು ಕಸರತ್ತುಗಳೊಂದಿಗೆ ಪ್ರದರ್ಶಿಸಿದರು.
ಒಬ್ಬರ ಮೇಲೆ ಮತ್ತೊಬ್ಬರು ಏರಿ ನಿರ್ಮಿಸಿದ ಪಿರಾಮಿಡ್, ಬಹುವಿಧದ ಜಿಗಿತ, ಚೂರಿ ಮೇಲೆ ಮಲಗಿದ ಕಸರತ್ತು, ಆಟ ರೋಮಾಂಚನಗೊಳಿಸಿತು. ಕಸರತ್ತಿನ ಬಳಿಕ ಶಿವನ ದರ್ಶನ. ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ನೀಲಕಂಠನ ಆರಾಧನೆಯ ‘ಭೋ ಶಂಭೋ, ಶಿವ ಶಂಭೋ, ಸ್ವಯಂ ಭೋ’ ಶಾಸ್ತ್ರೀಯ ನೃತ್ಯ ಮತ್ತೆ ಹೆಜ್ಜೆ-ಗೆಜ್ಜೆಗಳೆಡೆಗೆ ಸೆಳೆಯಿತು.
ಶಿವನ ಮಹಿಮೆಯನ್ನು ಸಾರುವ ಈ ಶಾಸ್ತ್ರೀಯ ನೃತ್ಯ ರೂಪಕವನ್ನು ಆಳ್ವಾಸ್ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಭಕ್ತಿ-ಭಾವದಲ್ಲಿ ಜನತೆ ಸಂಭ್ರಮಿಸಿದರು. ಹರಿಭಕ್ತಿಗೆ ಕಿವಿಯಾದವರು ಹರನ ಮಹಿಮೆಗೆ ಕಣ್ಣಾದರು.

ನೃತ್ಯದ ಬಳಿಕ ಕಸರತ್ತಿನ ಗಮತ್ತು. ಮಲ್ಲರು ದೇಹದಾರ್ಢ್ಯ ವರ್ಧನೆಗೆ ಕಂಬ ಬಳಸಿ ಮಾಡುತ್ತಿದ್ದ ಕಸರತ್ತು ‘ಮಲ್ಲಕಂಬ’ ಕ್ರೀಡೆಯಾಯಿತು. ಇದು ದೈಹಿಕ ಸೌಂದರ್ಯ, ಸಾಮರ್ಥ್ಯ ವರ್ಧನೆಯ ಸಾಹಸವೂ ಹೌದು. ನಮ್ಮ ನೆಲದ ಮಲ್ಲಕಂಬ ಕ್ರೀಡೆಗೆ ಸಾಂಸ್ಕೃತಿಕ ಸ್ವರೂಪ ನೀಡಿ, ವೇದಿಕೆಯ ಮೇಲೆ ಪ್ರದರ್ಶನವಾಗಿ ಪರಿವರ್ತಿಸುವ ಹಿಂದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರ ಕನಸಿದೆ. ಬಸವರಾಜ್ ಹಾಗೂ ಚೇತನ್ ತರಬೇತಿಯಲ್ಲಿ ಮೂಡಿ ಬಂದ ಮಲ್ಲಕಂಬ ಮತ್ತು ರೋಪ್ ಕಸರತ್ತು ಕಲಾಕ್ರೀಡೆಯಾಗಿ ಮೆರಗು ನೀಡಿತು. ಅಂತಾರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಗೆ ತೆರಳಿದ ತಂಡದಲ್ಲಿದ್ದ ಏಕೈಕ ಕರ್ನಾಟಕ ಪ್ರತಿನಿಧಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಎಂಬ ಹೆಮ್ಮೆಯನ್ನು ಕಾರ್ಯಕ್ರಮ ನಿರೂಪಿಸಿದ ನಿತೇಶ್ ಮಾರ್ನಾಡು ತಿಳಿಸಿದರು.
ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಸದಸ್ಯರು ‘ಹನುಮಾನ್ ಚಾಲೀಸಾ’ ನೃತ್ಯರೂಪಕ ನಡೆಸಿಕೊಟ್ಟರು. ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ರೂಪಕ ಮೂಡಿ ಬಂತು. ಬಳಿಕ ಗುಜರಾತಿ ಜಾನಪದ ವೈಭವದ ನೃತ್ಯಗಳ ಪ್ರದರ್ಶನವನ್ನು ಮಲಹರ್ ತಂಡವು ನೀಡಿತು. ‘ಗುಜರಾತ್ ಬಂಧನ್’ ಹಾಡಿನೊಂದಿಗೆ ತೆರೆಬಿತ್ತು.
























