ಭಾರತದ ಉದ್ಯಮ ಕ್ಷೇತ್ರದ ಯುಗ ಪ್ರವರ್ತಕನ ಬದುಕಿನಲ್ಲಿದೆ ಸಾವಿರಾರು ಸ್ಫೂರ್ತಿದಾಯಕ ಕಥೆ
ಹೊಸದಿಲ್ಲಿ : ನಿನ್ನೆ ರಾತ್ರಿ ನಮ್ಮನ್ನಗಲಿರುವ ರತನ್ ಟಾಟಾ ಅವರಿಗಾಗಿ ದೇಶ ಕಂಬನಿ ಮಿಡಿಯುತ್ತಿದೆ. ಜನರು ತಮ್ಮ ಕುಟುಂಬದ ಹಿರಿಯನನ್ನು ಕಳೆದುಕೊಂಡಂಥ ದುಃಖದ ಭಾವವನ್ನು ಅನುಭವಿಸುತ್ತಿದ್ದಾರೆ. ಟಾಟಾ ಕಂಪನಿ ಜನರ ಬದುಕಿನಲ್ಲಿ ಬೀರಿದ ಪರಿಣಾಮವಿದು. ಇಂದು ಇಡೀ ದೇಶದಲ್ಲಿ ಟಾಟಾ ಕಂಪನಿಯ ಯಾವುದಾದರೊಂದು ಉತ್ಪನ್ನವನ್ನು ಬಳಸದೆ ಇರುವ ಜನರನ್ನು ಹುಡುಕಿದರೂ ಸಿಗುವುದಿಲ್ಲ. ಉಪ್ಪಿನಿಂದ ಹಿಡಿದು ವಿಮಾನದ ತನಕ ಟಾಟಾ ಸಮೂಹ ಕೈಯಾಡಿಸದ ಕ್ಷೇತ್ರವಿಲ್ಲ. ಇದರ ಹಿಂದಿನ ಪ್ರೇರಕ ಶಕ್ತಿಯಾಗಿದ್ದವರು ರತನ್ ಟಾಟಾ.
ಹಿಂದೆ ಬರೀ ಬಸ್, ಲಾರಿಗಳ ಮೂಲಕವೇ ಜನರಿಗೆ ಟಾಟಾ ಕಂಪನಿಯ ಪರಿಚಯ ಇತ್ತು. ಆದರೆ 70ರ ದಶಕದ ಬಳಿಕ ಟಾಟಾ ಕಂಪನಿ ಒಂದೊಂದೇ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದ್ದಲ್ಲದೆ ಅಲ್ಲಿ ತನ್ನ ಅಚ್ಚಳಿಯದ ಛಾಪು ಒತ್ತಿ ಮುನ್ನಡೆಯುತ್ತಿದೆ. ಇದನ್ನೆಲ್ಲ ಸಾಧ್ಯವಾಗಿಸಿದ್ದು ರತನ್ ಟಾಟಾ ಅವರ ಉದ್ಯಮಶೀಲತೆ.
ಯಶಸ್ವಿ ಉದ್ಯಮಿಯಾಗಿದ್ದ ರತನ್ ಟಾಟಾ, ಟಾಟಾ ಸಮೂಹವನ್ನು ಜಾಗತಿಕವಾಗಿ ವಿಸ್ತರಿಸಿ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡಿದವರು. ಟಾಟಾ ಅವರ ಉದ್ಯಮಶೀಲತೆಯ ಬಗ್ಗೆ ದೇಶದಲ್ಲಿ ಅನೇಕ ದಂತಕಥೆಗಳೇ ಇವೆ. ಮ್ಯಾನೇಜ್‌ಮೆಂಟ್ ಗುರುಗಳು ಟಾಟಾ ಅವರ ಉದ್ಯಮದ ಬಗ್ಗೆ ಮಾತನಾಡದೆ ಪಾಠ ಮುಗಿಸುವುದೇ ಇಲ್ಲ. ಒಂದೊಂದು ಕಂಪನಿಯನ್ನು ಸ್ಥಾಪಿಸುವಾಗಲೂ ರತನ್ ಟಾಟಾ ಎದುರುಸಿದ ಸವಾಲುಗಳು, ಕಂಪನಿಗಳು ನಷ್ಟ ಅನುಭವಿಸಲು ತೊಡಗಿದಾಗ ಅವುಗಳನ್ನು ಮೇಲೆತ್ತಲು ಕೈಗೊಂಡ ದಿಟ್ಟ ನಿರ್ಧಾರಗಳು, ಕಂಪನಿಗಳ ಯಶಸ್ಸಿನ ನಾಗಾಲೋಟ ಹೀಗೆ ಪ್ರತಿಯೊಂದು ವಿಚಾರವೂ ಸ್ಫೂರ್ತಿದಾಯಕ.

ಟಾಟಾ ಇಂಡಸ್ಟ್ರೀಸ್ನ ವಿವಿಧ ಘಟಕಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಬಳಿಕ 1991ರಲ್ಲಿ ರತನ್ ಅವರು ಟಾಟಾ ಗ್ರೂಪ್‌ನ ಚೇರ್ಮನ್ ಆಗಿ ಆಯ್ಕೆಯಾದರು. ಅಲ್ಲಿಂದ ಟಾಟಾ ಸಮೂಹದ್ದು ಯಶಸ್ಸಿನ ನಾಗಾಲೋಟ ಎಂದೇ ಹೇಳಬಹುದು. ಅನೇಕಾನೇಕ ಎಡರುತೊಡರುಗಳು ಎದುರಾದರೂ ಟಾಟಾ ಅವುಗಳನ್ನೆಲ್ಲ ಎದುರಿಸಿ ಗೆದ್ದರು. 1991ರಲ್ಲಿ ರತನ್ ಟಾಟಾ ಅವರ ಕೈಗೆ ಕಂಪನಿ ಹಸ್ತಾಂತರವಾದಾಗ ಆ ಕಂಪನಿಯ ಆಸ್ತಿ ಒಟ್ಟು 10 ಸಾವಿರ ಕೋಟಿ ರೂಪಾಯಿಯಷ್ಟು ಮೌಲ್ಯವನ್ನು ಮಾತ್ರ ಹೊಂದಿತ್ತು. ಆಗಷ್ಟೇ ಉದಾರೀಕರಣಕ್ಕೆ ಭಾರತದ ಉದ್ಯಮ ವಲಯದ ಹೆಬ್ಬಾಗಿಲು ಕೂಡ ತೆರೆದುಕೊಂಡಿತ್ತು. ಅಂತಹ ಹೊತ್ತಲ್ಲಿ ಟಾಟಾ ಕಂಪನಿಯ ಜವಾಬ್ದಾರಿ ಹೊತ್ತ ರತನ್ ಟಾಟಾ ಮುಂದಿನ 21 ವರ್ಷ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು. 1991ರಿಂದ 2000ರವರೆಗೆ ರತನ್ ಟಾಟಾ ಉಸ್ತುವಾರಿಯಲ್ಲಿ ಟಾಟಾ ಸಮೂಹ ಜಾಗತಿಕವಾಗಿ ಬೆಳವಣಿಗೆಯಲ್ಲಿ ಭಾರಿ ವೇಗ ಪಡೆದುಕೊಂಡಿತು. ಈಗ ಟಾಟಾ ಸಮೂಹದ ಆಸ್ತಿ ಮೌಲ್ಯ ಹಲವು ಲಕ್ಷ ಕೋಟಿಗೇರಿದೆ.
ಈ ಹಾದಿಯಲ್ಲಿ ಟಾಟಾ ಅನೇಕ ಅವಮಾನಗಳನ್ನು, ಹಿನ್ನಡೆಗಳನ್ನು ಕೂಡ ಅನುಭವಿಸಿದ್ದಾರೆ. ಲಾರಿ, ಬಸ್‌ಗಳನ್ನು ಮಾತ್ರ ಉತ್ಪಾದಿಸುತ್ತಿದ್ದ ಟಾಟಾ ಕಂಪನಿ ಸಣ್ಣ ವಾಹನಗಳ ಉತ್ಪಾದನೆಗೆ ಮುಂದಾದಾಗ ಭಾರಿ ಹಿನ್ನಡೆಯಾಗಿತ್ತು. ಆ ಸವಾಲನ್ನು ಗೆದ್ದ ಟಾಟಾ ಸಮೂಹ ಇಂದು ಕಾರುಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ. ಅಂತೆಯೇ ನ್ಯಾನೋ ಕಾರು ಶುರು ಮಾಡಿ ನಷ್ಟ ನುಭವಿಸಿ ಕೊನೆಗೆ ಅದನ್ನು ಮುಚ್ಚಿಯೇ ಬಿಟ್ಟಿದೆ. ಇವೆಲ್ಲ ಟಾಟಾ ಕಂಪನಿಯ ಏಳುಬೀಳಿನ ಕೆಲವು ಉದಾಹರಣೆಗಳು. ಆದರೆ ತನ್ನನ್ನು ಅವಮಾನಿಸಿದ ವಿದೇಶದ ಕಾರು ಕಂಪನಿಯೊಂದನ್ನು ನಂತರ ರತನ್ ಟಾಟಾ ಖರೀದಿಸಿ ಸೇಡು ತೀರಿಸಿಕೊಂಡದ್ದು ಮಾತ್ರ ಉದ್ಯಮ ವಲಯದಲ್ಲಿ ಬಹಳ ಜನಜನಿತವಾಗಿರುವ ಕಥೆ. ಓರಿಯಂಟೇಶನ್ ತರಬೇತಿ ನೀಡುವವವರು, ಔದ್ಯೋಗಿಕ ವಲಯದ ಗುರುಗಳು ತಪ್ಪದೆ ಈ ಕಥೆಯನ್ನು ಹೇಳುತ್ತಿರುತ್ತಾರೆ.
ಅವಮಾನಿಸಿದ್ದ ಕಂಪನಿಯನು ಉಳಿಸುವ ಸಲುವಾಗಿ ಖರೀದಿಸಿದರು ಟಾಟಾ
1998ರಲ್ಲಿ ಟಾಟಾ ಮೋಟಾರ್ಸ್ ‘ಟಾಟಾ ಇಂಡಿಕಾ’ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದು ರತನ್ ಟಾಟಾ ಅವರ ಕನಸಿನ ಯೋಜನೆಯಾಗಿತ್ತು. ಆದರೆ ಕಾರು ಸರಿಯಾಗಿ ಮಾರಾಟವಾಗದೆ ಸಂಸ್ಥೆ ನಷ್ಟದಲ್ಲಿತ್ತು. ಈ ಕಂಪನಿಯನ್ನು ಮಾರಲು ಪ್ರಸಿದ್ಧ ಫೋರ್ಡ್ ಕಂಪನಿ ಮೊರೆ ಹೋಗಿದ್ದರು. ಆದರೆ ಕಾರಿನ ಸಹವಾಸ ನಿಮಗ್ಯಾಕೆ ಬೇಕಿತ್ತು ಎಂದು ಅವಮಾನಿಸಿದ್ದ ಫೋರ್ಡ್ ಕಂಪನಿಯ ಮಾಲಕರು ಖರೀದಿಸುವುದಾಗಿ ಭರವಸೆ ನೀಡಿ ಮತ್ತೆ ತಿರುಯೂ ನೋಡಿರಲಿಲ್ಲ. ಈ ಅವಮಾನವನ್ನು ಮರೆಯದೆ ಸವಾಲಾಗಿ ಸ್ವೀಕರಿಸಿದ ರತನ್ ಟಾಟಾ, ಇಂಡಿಕಾ ಕಾರು ಮತ್ತು ಟಾಟಾ ಮೋಟಾರ್ಸ್ ಕಂಪನಿಯನ್ನ ಲಾಭದ ಉತ್ತುಂಗಕ್ಕೆ ತಂದು ನಿಲ್ಲಿಸಿದರು. ಕೊನೆಗೆ 2008ರಲ್ಲಿ ಫೋರ್ಡ್ ಗ್ರೂಪ್‌ನ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ ದಿವಾಳಿಯಾದಾಗ ಆ ಕಂಪನಿಯನ್ನೇ ಖರೀದಿಸಿ ಬಿಟ್ಟರು. ಫೋರ್ಡ್ ಕಂಪನಿ ರತನ್ ಟಾಟಾ ಅವರಿಗೆ ʼನಮ್ಮ ಮಾನ ಉಳಿಸಿದ್ದೀರಿʼ ಎಂದು ದೀನ ಭಾವದಿಂದ ಧನ್ಯವಾದ ಅರ್ಪಿಸಿತ್ತು.

ಮಧ್ಯಮವರ್ಗದ ಕಾರು ಕನಸು ನನಸು ಮಾಡಿದ ಟಾಟಾ
ಕೇವಲ ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗಕ್ಕೆ ಸೀಮಿತವಾಗಿದ್ದ ಕಾರುಗಳು ಮಧ್ಯಮ ವರ್ಗ ಮತ್ತು ಬಡವರಿಗೂ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ರತನ್ ಟಾಟಾ ಆರಂಭಿಸಿದ್ದೇ ಟಾಟಾ ನ್ಯಾನೋ ಕಾರು. ಒಂದು ಲಕ್ಷದ ಕಾರು ಅಂತಲೇ ಹೆಸರುವಾಸಿಯಾದ ನ್ಯಾನೋ ಕಾರು ಮಾರುಕಟ್ಟೆಗೆ ಬರುತ್ತಿದ್ದಂತೆ ಮಧ್ಯಮ ವರ್ಗ ಮುಗಿಬಿದ್ದು ಖರೀದಿಸಿತ್ತು. ಆದರೆ ಈ ಕಾರು ಟಾಟಾ ನಿರೀಕ್ಷಿಸಿದಷ್ಟು ಯಶಸ್ಸು ಪಡೆಯಲಿಲ್ಲ. ಮಧ್ಯಮ ವರ್ಗದವರು ಕಾರು ಖರೀದಿಸುವ ಕನಸು ಹೊಂದಿದ್ದರೂ, ನೆರೆಮನೆಯಲ್ಲಿ ದೊಡ್ಡ ಕಾರು ಇರುವಾಗ ತನ್ನ ಬಳಿ ಇರುವುದು ಒಂದು ಲಕ್ಷದ ಕಾರು ಎಂಬ ಕೀಳರಿಮೆಯ ಭಾವ ಭಾರತೀಯರಲ್ಲಿ ಇರುತ್ತದೆ ಎಂಬ ಅಂಶವನ್ನು ತಿಳಿಯಲು ಟಾಟಾ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಬೇಡಿಕೆಯಿಲ್ಲದೆ ಟಾಟಾ ನ್ಯಾನೋ ಕಾರು ಘಟಕವನ್ನು ಮುಚ್ಚಬೇಕಾಯಿತು. ಇದು ಕೂಡ ಔದ್ಯೋಗಿಕ ವಲಯದಲ್ಲಿ ಪಾಠವಾಗುವಂಥ ರತನ್ ಟಾಟಾ ಅವರ ಬದುಕಿನ ಒಂದು ಅಧ್ಯಾಯ.
























