ಮಂಗಳೂರು : ದೇಶವನ್ನೇ ಬೆಚ್ಚಿ ಬೀಳಿಸಿದ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತ ಘಟನೆ ನಡೆದು ಇಂದಿಗೆ 14 ವರ್ಷ ತುಂಬಿದೆ. ಕಳೆದ 2010ರ ಮೇ 22ರಂದು ಬೆಳಗ್ಗೆ 6:20ಕ್ಕೆ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಹಂತದಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ವಿಮಾನದಲ್ಲಿದ್ದ 166 ಮಂದಿಯ ಪೈಕಿ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಪಾರಾಗಿದ್ದರು. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಗುರುತು ಹಿಡಿಯಲಾಗದ 12 ಮಂದಿಯ ಮೃತದೇಹಗಳನ್ನು ಕುಳೂರಿನ ನದಿ ಕಿನಾರೆಯಲ್ಲಿ ಸಮಾಧಿ ಮಾಡಲಾಗಿತ್ತು. ಅದೇ ಜಾಗದಲ್ಲಿ ದುರಂತದಲ್ಲಿ ಮಡಿದವರ ನೆನಪಿಗಾಗಿ ಪಾರ್ಕ್ ನಿರ್ಮಾಣ ಮಾಡಲಾಗಿದೆ.
ದುರಂತದಲ್ಲಿ ಮಡಿದ 158 ಮಂದಿಯ ನೆನಪಿಗಾಗಿ ಇಂದು ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೂಳೂರು ಸೇತುವೆಯಿಂದ ತಣ್ಣೀರು ಬಾವಿ ರಸ್ತೆಗೆ ತಿರುಗುವಲ್ಲಿ ನಿರ್ಮಿಸಲಾದ ಪಾರ್ಕ್ನಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಜಿಲ್ಲಾ ಪೊಲೀಸ್ ಅಧಿಕಾರಿಗಳು, ವಿಮಾನ ನಿಲ್ದಾಣದ ಅಧಿಕಾರಿಗಳು ಸೇರಿದಂತೆ ಮಡಿದವರ ಕುಟುಂಬಸ್ಥರು ಭಾಗವಹಿಸಿದರು.

























