ಪುತ್ತೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಕಳೆದ 2-3 ತಿಂಗಳಿನಿಂದ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ಸಹಿತ ಗಡಿಪಾರು ಮಾಡುವ ಕಾರ್ಯಕ್ಕೆ ಕೈ ಹಾಕುತ್ತಿದ್ದು, ಈ ಪ್ರಕ್ರಿಯೆಯನ್ನು ನಿಲ್ಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರಕಾರ ಜವಾಬ್ದಾರಿಯಾಗಲಿದೆ ಎಂದು ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೂ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ನಿಲ್ಲಿಸದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡುವ ಪರಿಸ್ಥಿತಿ ಬರಲಿದೆ ಎಂದ ಅವರು, ಈ ರೀತಿ ಧರ್ಮ ರಕ್ಷಣೆ ಜತೆ ಗೋಹತ್ಯೆ, ಲವ್ ಜಿಹಾದಿ ಮಟ್ಟ ಹಾಕುವ ಕೆಲಸವನ್ನಷ್ಟೇ ನಮ್ಮ ಕಾರ್ಯಕರ್ತರು ಮಾಡುತ್ತಿದ್ದು, ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ಹಾಗಂತ ಗಡಿಪಾರು ಆದೇಶ ಮಾಡುವುದಾದರೆ ಸಾವಿರ ಹಿಂದೂ ಕಾರ್ಯಕರ್ತರ ಪಟ್ಟಿ ನೀಡುತ್ತೇವೆ. ತಾಕತ್ತಿದ್ದರೆ ಎಲ್ಲರನ್ನೂ ಗಡಿಪಾರು ಮಾಡಲಿ ಎಂದು ಸವಾಲೆಸೆದರು.
ಈ ರೀತಿಯ ಪ್ರಕ್ರಿಯೆಗಳಿಂದ ಸರಕಾರವಿರಲಿ, ಇಲಾಖೆ ಇರಲಿ ಹಿಂದೂ ಕಾರ್ಯಕರ್ತರ ಆತ್ಮ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಇದು ಖಂಡನೀಯ. ಇದೀಗ ಸಂಘಟನೆಯ ಭರತ್ ಕುಮ್ಡೇಲು ಅವರಿಗೆ ಗಡಿಪಾರು ಆದೇಶ, ಜಯಪ್ರಕಾಶ್ ಹಾಗೂ ಜಯರಾಮ ಎಂಬರ ಮೇಲೆ ಗೂಂಡಾಕಾಯ್ದೆ ಪ್ರಕರಣ ದಾಖಲು ಮಾಡುವ ಮೂಲಕ ಸರಕಾರಿ ವ್ಯವಸ್ಥೆಯೇ ಗೂಂಡಾಗಿರಿ ಮಾಡುತ್ತಿದೆ. ಇದನ್ನು ಕಾನೂನಾತ್ಮಕವಾಗಿ ಹೋರಾಡುವ ಶಕ್ತಿ ನಮ್ಮ ಸಂಘಟನೆಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಶಿಫ್ಟ್ ಕಾರಿನಲ್ಲಿ ಅಕ್ರಮ ಗೋಸಾಗಾಟ ವನ್ನು ಹಿಂದೂ ಕಾರ್ಯಕರ್ತರು ತಡೆಹಿಡಿದಿದ್ದರೂ ಆರೋಪಿಗಳು ಯಾರೆಂದು, ಎಲ್ಲೆಲ್ಲಿ ಕಸಾಯಿಖಾನೆಗಳಿವೆ ಎಂಬುದು ಪೊಲೀಸ್ ಇಲಾಖೆಗೆ ಗೊತ್ತಿದ್ದರೂ ಇದುವರೆಗೆ ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆದಿಲ್ಲ. ಅಲ್ಲದೆ ಕಡಬದಲ್ಲಿ ಗೋಸಾಗಾಟ ಮಾಡುತ್ತಿದ್ದ ಕಾರೊಂದು ಪಾದಚಾರಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಅವರ ಮರಣಕ್ಕೆ ಕಾರಣವಾದ ಘಟನೆಯೂ ನಡೆದಿದೆ. ಪೊಲೀಸ್ ಇಲಾಖೆಯ ಕಾನೂನಾತ್ಮಕ ವೈಫಲ್ಯವನ್ನು ಇದು ಎತ್ತಿ ತೋರಿಸುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದಲ್ಲಿ ಸಂಘಟನೆಯೇ ಗೋಸಾಗಾಟದಂತ ಪ್ರಕರಣವನ್ನು ತಡೆಹಿಡಿಯುವ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳಬೇಕಾದ ಎಚ್ಚರಿಕೆಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ನವೀನ್ ನೆರಿಯ, ಸತೀಶ್ ಬಿ.ಎಸ್., ಜಯಂತ್ ಕುಂಜೂರುಪಂಜ, ಶ್ರೀಧರ ತೆಂಕಿಲ ಉಪಸ್ಥಿತರಿದ್ದರು.
























