ಕೆಲವೊಮ್ಮೆ ಕೆಲವರು ತಾವೂ ಮಾಡದ ತಪ್ಪಿಗೆ ಕೆಲವು ಪ್ರಕರಣಗಳಲ್ಲಿ ಆರೋಪಿಗಳಾಗಿ ಸಿಲುಕಿಕೊಳ್ಳುತ್ತಾರೆ. ತನಿಖೆಯ ಭಾಗವಾಗಿ, ಅವರು ಕೆಲವು ತಿಂಗಳು, ಇನ್ನೂ ಕೆಲವರೂ ವರ್ಷಗಳ ವರೆಗೆ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಇದು ನಿಜಕ್ಕೂ ನರಕದ ಜೀವನ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಅಂತಹ ಸಂದರ್ಭಗಳಲ್ಲಿ ವ್ಯಕ್ತಿಯು ಗಂಭೀರವಾಗಿ ಖಿನ್ನತೆಗೆ ಒಳಗಾಗುತ್ತಾನೆ. ಅವರು ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಕೊನೆಗೆ ಖಿನ್ನತೆಗೆ ಒಳಗಾಗಿ ಸಾಮಾನ್ಯ ಜೀವನ ನಡೆಸಲಾಗದ ಸ್ಥಿತಿ ತಲುಪುತ್ತಾರೆ. ಆದರೆ, ಉತ್ತರ ಪ್ರದೇಶದ ಅಮಿತ್ ಚೌಧರಿ ಎಂಬ ವ್ಯಕ್ತಿ ಅಂತಹ ನಿರಪರಾಧಿಗಳಿಗೆ ಸ್ಪೂರ್ತಿಯಾಗಿದ್ದಾರೆ.
12 ವರ್ಷಗಳ ಹಿಂದೆ ಅಮಿತ್ ಚೌಧರಿ ಎಂಬ ಯುವಕ ತಾನೂ ಮಾಡದ ಅಪರಾಧಕ್ಕೆ ಆರೋಪಿಯಾಗಿ ಸಿಕ್ಕಿಬಿದ್ದಿದ್ದ. ಆಗ ಅವನಿಗೆ 18 ವರ್ಷ. ಮೀರತ್ನಲ್ಲಿ ಇಬ್ಬರು ಕಾನ್ಸ್ಟೆಬಲ್ಗಳ ಹತ್ಯೆ ಪ್ರಕರಣದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು. ಇದಲ್ಲದೆ, ಆತನ ಮೇಲೆ ಗ್ಯಾಂಗ್’ಸ್ಟರ್ ಮುದ್ರೆ ಕೂಡ ಬಿದ್ದಿತ್ತು. ಇದರಿಂದ ಬಾಳಿ ಬದುಕಬೇಕಿದ್ದ ಯುವಕನ ಬದುಕು ಹಠಾತ್ತನೆ ಕತ್ತಲಮಯವಾಗಿತ್ತು.
ಪೊಲೀಸರ ಕೊಲೆ ಪ್ರಕರಣದಲ್ಲಿ ಸಿಕ್ಕಿಕೊಂಡ ಬಡಪಾಯಿ:
ಘಟನೆಯಲ್ಲಿ ಸಾವನ್ನಪ್ಪಿದವರು ಪೊಲೀಸರೇ ಆಗಿದ್ದರಿಂದ ಎಲ್ಲರ ಕಣ್ಣು ಈ ಪ್ರಕರಣದತ್ತ ನೆಟ್ಟಿತ್ತು. ಅಂದಿನ ಯುಪಿ ಮುಖ್ಯಮಂತ್ರಿ ಮಾಯಾವತಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆದೇಶಿಸಿದ್ದರು. ವಾಸ್ತವವಾಗಿ, ಕೊಲೆ ನಡೆದಾಗ ಅಮಿತ್ ಮೀರತ್ನಲ್ಲಿ ಇರಲಿಲ್ಲ. ಆತ ಶಾಮ್ಲಿ ಪೇಟೆಯಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿದ್ದ. ಆದರೆ, ಈ ಪ್ರಕರಣದಲ್ಲಿ ಬಂಧಿತ 17 ಮಂದಿಯ ಜೊತೆಗೆ ಪೊಲೀಸರು ಈತನ ಹೆಸರನ್ನೂ ಸೇರಿಸಿದ್ದರು. ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಚೌದರಿಯನ್ನು ಕೈಲ್ ಎಂಬ ವ್ಯಕ್ತಿಗೆ ಸೇರಿದ ಗ್ಯಾಂಗ್ನ ಸದಸ್ಯನೆಂದು ಬಿಂಬಿಸಿ, ಕೊಲೆಗೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿತ್ತು. ಇದರಿಂದಾಗಿ ಅಮಿತ್ ಎರಡು ವರ್ಷ ಕಂಬಿ ಎಣಿಸಬೇಕಾಯಿತು.
ಲಾ ಮುಗಿಸಿ ಕೇಸ್ ಗೆದ್ದ ಯುವಕ:
ಅಮಿತ್ ತನ್ನ ಜೀವನದಲ್ಲಿ ಎದುರಾದ ಈ ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸಲು ನಿರ್ಧರಿಸಿದರು. ಜಾಮೀನು ಪಡೆದು ಹೊರಬಂದು ಕಾನೂನು ಅಧ್ಯಯನ ಮಾಡಿದ. ಎಲ್.ಎಲ್.ಬಿ., ಪದವಿ ಪಡೆದು ಅವರು ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾನೂನು ಪದವಿ ಪಡೆದರು. ತಮ್ಮ ಪ್ರಕರಣವನ್ನು ತಾವೇ ಕೈಗೆತ್ತಿಕೊಂಡು ವಾದ ಮಂಡಿಸಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣದಲ್ಲಿ ಅಮಿತ್ ಚೌಧರಿ ಸೇರಿದಂತೆ 13 ಮಂದಿಯನ್ನು ನಿರಪರಾಧಿಗಳೆಂದು ತೀರ್ಪು ನೀಡಿದೆ. ಕೊನೆಗೂ ಕೇಸ್ ಗೆದ್ದಿರುವ ಅಮಿತ್ ಚೌಧರಿ, ನಿರಪರಾಧಿ ಎಂದು ಸಾಬೀತಾಯಿತು.
ಗ್ಯಾಂಗ್ ಸೇರುವಂತೆಯೂ ಒತ್ತಾಯ:
ರೈತನ ಮಗನಾದ ಆತ ಜೈಲಿನ ಆಮಿಷಗಳಿಗೆ ಮಣಿಯಲಿಲ್ಲ ಎಂಬುದು ಗಮನಾರ್ಹ. ಜೈಲಿನಲ್ಲಿದ್ದಾಗ ಅನೇಕರು ತಮ್ಮ ಗ್ಯಾಂಗ್ಗೆ ಸೇರಲು ಒತ್ತಾಯಿಸಿದ್ದರು ಎಂದು ಸ್ವತಃ ಅಮಿತ್ ಹೇಳುತ್ತಾರೆ. ಆದರೆ, ಅವರು ಎಲ್ಲಾ ಆಫರ್ ತಿರಸ್ಕರಿಸಿದರು. ಈ ಪ್ರಕ್ರಿಯೆಯಲ್ಲಿ ಜೈಲರ್ ಕೂಡ ಅವರಿಗೆ ಸಹಾಯ ಮಾಡಿದರು. ಮೊದಲಿಗೆ ದರೋಡೆಕೋರರು ಉಳಿದುಕೊಂಡಿದ್ದ ಬ್ಯಾರಕ್’ನಲ್ಲಿ ಅಮಿತ್ ಚೌಧರಿಯನ್ನು ಬಿಡಲಾಗಿತ್ತು. ನಂತರ ಬೇರೆ ಬ್ಯಾರಕ್ಗೆ ಸ್ಥಳಾಂತರ ಮಾಡಿ ನೆರವು ನೀಡಿದ್ದರು ಎಂದು ಜೈಲರ್ ಸಹಾಯವನ್ನು ನೆನಪಿಸಿಕೊಂಡಿದ್ದಾರೆ ಅಮಿತ್.
ನೈಜ ಆರೋಪಿಗಳಿಗೆ ಶಿಕ್ಷೆ:
ಕಾನ್ಸ್ಟೇಬಲ್ಗಳಾದ ಕೃಷ್ಣಪಾಲ್ ಮತ್ತು ಅಮಿತ್ ಕುಮಾರ್ ಅವರನ್ನು ಕೊಂದು ಅವರ ಬಳಿಯಿದ್ದ ಬಂದೂಕುಗಳನ್ನು ತೆಗೆದುಕೊಂಡು ಹೋಗಲು ಅಮಿತ್ ಚೌಧರಿ ಸಂಚು ರೂಪಿಸಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಯಿತು. ಆದ್ದರಿಂದ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅವಳಿ ಹತ್ಯೆಯಲ್ಲಿ ಮೂಲ ಆರೋಪಿಗಳಾದ ಸುಮಿತ್ ಕೈಲ್, ನೀತು ಮತ್ತು ಧರ್ಮೇಂದ್ರ ತಪ್ಪಿತಸ್ಥರೆಂದು ಸಾಬೀತಾಗಿದೆ. ಆದರೆ ಸುಮಿತ್ ಕೈಲ್ 2013 ರಲ್ಲಿ ಎನ್ಕೌಂಟರ್ನಲ್ಲಿ ಹತನಾದ. ಕಾನ್ಸ್ಟೇಬಲ್ಗಳನ್ನು ಕೊಂದು ಅವರ ಬಳಿ ಬಂದೂಕು ತೆಗೆದುಕೊಂಡಿದ್ದಕ್ಕಾಗಿ ನೀತುಗೆ ಜೀವಾವಧಿ ಶಿಕ್ಷೆ ಮತ್ತು 20,000 ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ. ತೀರ್ಪು ಬರುವ ಮುನ್ನವೇ ಧರ್ಮೇಂದ್ರ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು.
























