ಪುತ್ತೂರು: ಏಪ್ರಿಲ್ 11ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿದ್ದು, ಏ. 20ರಂದು ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ತಾಲೂಕು ಆಡಳಿತ ಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಬಾರಿ ಚುನಾವಣೆಯನ್ನು ಸೂಸೂತ್ರ ಮತ್ತು ನಿರ್ಭೀತಿಯಿಂದ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 220 ಮತದಾನ ಕೇಂದ್ರಗಳಿವೆ. ಈಗಾಗಲೇ ಇವತ್ತಿನ ದಿನಕ್ಕೆ ಸಂಬಂಧಿಸಿ 2,10,792 ಮತದಾರರಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಮಾಧ್ಯಮ ಸಹಿತ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಅಂಚೆ ಮತದಾನ ವ್ಯವಸ್ಥೆ ಇದೆ. ಚುನಾವಣೆಯ ಮೂರು ದಿನ ಮುಂದೆ ಈ ಮತದಾನ ನಡೆಯಲಿದೆ. ಅದಕ್ಕೆ ಆಯಾ ಇಲಾಖೆಯಿಂದ ನೊಡೇಲ್ ಅಧಿಕಾರಿಯೊಬ್ಬರು ಅವರ ಇಲಾಖೆಯಿಂದ ಚುನಾವಣಾ ಕರ್ತವ್ಯದಲ್ಲಿರುವ ಪ್ರತಿನಿಧಿಗಳ ಪಟ್ಟಿ ನೀಡುತ್ತಾರೆ. ಈ ಆಧಾರದಲ್ಲಿ ಮತದಾನ ನಡೆಯುತ್ತದೆ ಎಂದರು.
ಮತದಾನಕ್ಕೆ ಸಂಬಂಧಿಸಿ ಏ. 5ಕ್ಕೆ ಜಿಲ್ಲಾಧಿಕಾರಿಯವರು ವಿದ್ಯುನ್ಮಾನ ಮತಯಂತ್ರವನ್ನು ತಾಲೂಕುಗಳಿಗೆ ನೀಡಲಿದ್ದಾರೆ. ಏ. 6ಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ವಿದ್ಯುನ್ಮಾನ ಮತಯಂತ್ರ ನೀಡಲಿದ್ದಾರೆ. ಅದನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಭದ್ರತೆಯೊಂದಿಗೆ ಇರಿಸಲಾಗುತ್ತದೆ. ಅಲ್ಲೇ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ತರಬೇತಿ ನಡೆಯಲಿದೆ. ಏ. 9ಕ್ಕೆ ಅಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಚುನಾವಣಾಧಿಕಾರಿ ಗಿರೀಶ್ ನಂದನ್ ಹೇಳಿದರು.
ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಕಡ್ಡಾಯ:
ಮಾಧ್ಯಮಗಳಲ್ಲಿ ಜಾಹಿರಾತಿ ಪ್ರಕಟ, ಪ್ರಸಾರಕ್ಕೆ ಅರ್ಜಿ ನಮೂನೆ ಭರ್ತಿ ಮಾಡಬೇಕು. ಇದಕ್ಕೆ ಜಿಲ್ಲಾ ವಾರ್ತಾಧಿಕಾರಿ ನೋಡೆಲ್ ಅಧಿಕಾರಿ. ವಿವಿಧ ಟಿವಿ, ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ಮೇಲೆ ನಿಗಾ ವಹಿಸಲಾಗುತ್ತದೆ. ವಿದ್ಯುನ್ಮಾನ ಮಾಧ್ಯಮ ಹಾಗೂ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ದೃಶ್ಯಗಳ ಕುರಿತು, ಸ್ಕ್ರೋಲಿಂಗ್ ಜಾಹಿರಾತು ಕುರಿತು ನಿಗಾ ವಹಿಸಿ ಪರಿಶೀಲನೆ ನಡೆಸಲಾಗುತ್ತದೆ. ರಾಜಕೀಯಕ್ಕೆ ಸಂಬಂಧಿಸಿ ಪತ್ರಿಕಾಗೊಷ್ಠಿ ನಡೆಸುವ ಮೊದಲು ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಜಿಲ್ಲೆ ಮತ್ತು ತಾಲೂಕಿನಲ್ಲಿ ಕಣ್ಗಾವಲು ಟೀಮ್ ಸಿದ್ಧವಿದೆ ಎಂದು ಚುನಾವಣಾಧಿಕಾರಿ ಹೇಳಿದರು. ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಜಿ. ಶಿವಶಂಕರ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಉಪಸ್ಥಿತರಿದ್ದರು.
























