ಪುತ್ತೂರು: ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಡಿ. ೧೨ರಂದು ಶಾಸಕ ಸಂಜೀವ ಮಠಂದೂರು ಅವರು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಂಜೀವ ಮಠಂದೂರು ಅವರು, ದೈವಾರಾಧನೆ, ನಾಗಾರಾಧನೆಯ ವಿಶಿಷ್ಟ ಪರಂಪರೆಯನ್ನು ತುಳುನಾಡು ನೀಡಿದೆ. ಶ್ರದ್ಧೆ, ನಂಬಿಕೆಯ ತಳಹದಿಯ ಮೇಲೆ ಇಲ್ಲಿ ದೈವದ ಆರಾಧನೆ ನಡೆಯುತ್ತಿದೆ. ಆದ್ದರಿಂದ ದೈವಸ್ಥಾನಕ್ಕೆ ಸಂಬಂಧಪಟ್ಟ ಒಂದು ಕಾರ್ಯಕ್ಕೆ ಮುಂದಡಿ ಇಟ್ಟಿದ್ದೇವೆ ಎಂದರೆ, ಅದಕ್ಕೆ ಬೇಕಾದ ಕೆಲಸಗಳು ಒಂದೊಂದಾಗಿ ಕೂಡಿಕೊಂಡು ಬರುತ್ತವೆ. ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಮುಂದಾಗಿದ್ದು, ಆಮಂತ್ರಣ ಪತ್ರವನ್ನು ಇಂದು ಬಿಡುಗಡೆ ಮಾಡಿದ್ದೇವೆ ಎಂದರು.

ದೈವಸ್ಥಾನಕ್ಕೆ ಅಗತ್ಯವಿರುವ ಜಾಗವನ್ನು ಇಲಾಖೆಯ ಮೂಲಕ ಕಾಯ್ದರಿಸಲು ಪ್ರಯತ್ನಿಸುವುದಾಗಿ ತಿಳಿಸಿದ ಶಾಸಕರು, ದೈವಸ್ಥಾನದ ಮುಂಭಾಗದಲ್ಲಿ ಇಂಟರ್ಲಾಕ್ ಅಳವಡಿಸಲು ೫ ಲಕ್ಷ ರೂ.ವನ್ನು ನೀಡುವುದಾಗಿ ಘೋಷಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ೫ ಕೋಟಿ ರೂ. ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಅನುದಾನ ಮಂಜೂರಾದಾಗ ಇನ್ನಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪಾಣಾಜೆ ಮಾತನಾಡಿ, ಎಲ್ಲಾ ಕೆಲಸಗಳು ಊರವರ ಸಹಕಾರದಿಂದ ನಡೆಯುತ್ತಿವೆ ಎಂದರು. ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಆಚಾರ್ ಹಿಂದಾರ್ ಮಾಹಿತಿ ನೀಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರವೀಂದ್ರನಾಥ್ ರೈ ಬಳ್ಳಮಜಲು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಂಡೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ, ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಗುಲಾಬಿ ಎನ್. ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ, ಕೋಶಾಧಿಕಾರಿ ಅನಿಲ್ ಕಣ್ಣಾರ್ನೂಜಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಸ್ವಾಗತಿಸಿದರು.
























