ಪುತ್ತೂರು: ಬೆಳ್ಳಾರೆಯ ಉದ್ಯಮಿ ನವೀನ್ ಕಾಮಧೇನು ಅವರನ್ನು ಅಪಹರಣ ಮಾಡಲಾಗಿದೆ ಎಂಬ ವದಂತಿ ಹರಡಿದೆ.
ಬೆಳ್ಳಾರೆಯಲ್ಲಿ ಜ್ಯುವೆಲ್ಲರ್ಸ್ ಉದ್ಯಮ ನಡೆಸುತ್ತಿರುವ ನವೀನ್ ಕಾಮಧೇನು ಅವರನ್ನು, ಅವರ ಮನೆಯಿಂದಲೇ ಅಪಹರಣ ಮಾಡಲಾಗಿದೆ ಎಂಬ ಮಾಹಿತಿ ಹರಡಿದೆ. ಅಲ್ಲದೇ, ತಂಡದ ಕೃತ್ಯವನ್ನು ತಡೆಯಲು ಬಂದ ನವೀನ್ ಕಾಮಧೇನು ಅವರ ತಾಯಿಯ ಮೇಲೂ ಹಲ್ಲೆ ನಡೆಸಿದೆ. ಬಳಿಕ ನವೀನ್ ಕಾಮಧೇನು ಅವರನ್ನು ಬಲವಂತವಾಗಿ ಆ್ಯಂಬುಲೆನ್ಸಿನಲ್ಲಿ ಕುಳ್ಳಿರಿಸಿ, ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಈ ಕೃತ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ದಿವ್ಯಪ್ರಭಾ ಅವರೇ ಈ ಕೃತ್ಯ ನಡೆಸಿದ್ದಾರೆ ಎಂಬ ಸಂದೇಶಗಳು ಹರಿದಾಡುತ್ತಿವೆ.
ಅಪಹರಣದ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ, ಸುಳ್ಯದ ಆ್ಯಂಬುಲೆನ್ಸ್ ತಂಡವೊಂದು ತಮ್ಮ ಗ್ರೂಪುಗಳಿಗೆ ಸಂದೇಶ ರವಾನಿಸಿದೆ. ತಕ್ಷಣದಲ್ಲಿ ಎಚ್ಚೆತ್ತುಕೊಂಡ ಸುಂಟಿಕೊಪ್ಪ ಬಳಿಯ ಆ್ಯಂಬುಲೆನ್ಸ್ ತಂಡದವರು, ಅಪಹರಣ ಮಾಡಲಾಗುತ್ತಿದೆ ಎನ್ನಲಾದ ಆ್ಯಂಬುಲೆನ್ಸ್ ನಿಂದ ನವೀನ್ ಕಾಮಧೇನು ಹಾಗೂ ಇತರರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ, ನವೀನ್ ಎನ್ನುವವರನ್ನು ಕುಡಿತ ಬಿಡಿಸಲು ಬೆಂಗಳೂರಿಗೆ ಕರೆದೊಯ್ಯುತ್ತಿರುವುದಾಗಿ ಆ್ಯಂಬುಲೆನ್ಸ್ ಚಾಲಕ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.