ಪುತ್ತೂರು : ಪುತ್ತೂರಿನ ಬೊಳುವಾರಿನಲ್ಲಿ ವ್ಯಕ್ತಿಯೋರ್ವರು ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ಎ. 10 ರಂದು ಸಂಭವಿಸಿದೆ.
ನಂದಕುಮಾರ್ (50) ಎಂಬವರೇ ಮೃತ ವ್ಯಕ್ತಿ. ಇವರು ಸುಮಾರು 20 ವರ್ಷಗಳ ಹಿಂದೆ ಪುತ್ತೂರಿಗೆ ಬಂದು ಬೊಳುವಾರಿನಲ್ಲಿ ತನ್ನ ಸಂಸಾರದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು. ಎ. 3 ರಂದು ನಂದಕುಮಾರ್ ರವರ ಪತ್ನಿ ಗೋಮತಿಯವರು ಮಗನೊಂದಿಗೆ ಸ್ವಂತ ಊರಿಗೆ ಹೋಗುವಾಗ ಅರಿವಳಗನ್(ನಂದಕುಮಾರ್ ರವರ ಗೆಳೆಯ) ಅವರಲ್ಲಿ ನಂದಕುಮಾರ್ ರವರನ್ನು ನೋಡಿಕೊಳ್ಳುವಂತೆ ತಿಳಿಸಿದ್ದರು.
ಎ.10 ರಂದು ಗೋಮತಿಯವರು ಅರಿವಳಗನ್‌ರಿಗೆ ಕರೆ ಮಾಡಿ, ನಂದಕುಮಾರ್ ರವರು ಪೋನ್ ಕಾಲ್ ರೀಸಿವ್ ಮಾಡುತ್ತಿಲ್ಲ ಮನೆಗೆ ಹೋಗಿ ನೋಡಿ ಎಂದಾಗ ನಂದಕುಮಾರ್ ರವರ ಬಾಡಿಗೆ ಮನೆಗೆ ಹೋಗಿ ನೋಡಿದಾಗ ಮನೆಯ ಒಳಗಿನಿಂದ ಚೀಲಕ ಹಾಕಿದ್ದು, ಕಿಟಕಿಯ ಬಾಗಿಲು ತೆರೆದು ನೋಡಿದಾಗ ನಂದಕುಮಾರ್ ರವರು ಮನೆಯ ಹಾಲ್ ನಲ್ಲಿ ಮಲಗಿದ ರೀತಿ ಬಿದ್ದುಕೊಂಡಿದ್ದರು. ಆನಂತರ ಬಾಗಿಲನ್ನು ಬಲಾತ್ಕಾರವಾಗಿ ತೆರೆದು ಒಳಗೆ ಹೋದಾಗ ನಂದಕುಮಾರ್ ರವರು ಮಾತನಾಡದೇ ಇದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ನಂದಕುಮಾರ್ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.