ಬಂಟ್ವಾಳ : ಬೈಕ್ ಪ್ರಪಾತಕ್ಕೆ ಬಿದ್ದು, ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಚಿಕ್ಕ ಮಂಗಳೂರು ಮೂಲದ ಯುವಕನೋರ್ವ ಮೃತಪಟ್ಟ ಘಟನೆ ಏ. 10 ರ ಮುಂಜಾವಿನ ವೇಳೆ ಬಿಸಿರೋಡಿನ ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.
ಯಶೋಧರ(25) ಎಂಬವರೇ ಮೃತ ದುರ್ದೈವಿ. ಚಿಕ್ಕಮಗಳೂರು ನಿವಾಸಿಯಾದ ಇವರು ಮಂಗಳೂರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಬೈಕ್ ಚಲಾಯಿಸುತ್ತಿದ್ದ ಈತನ ಸ್ನೇಹಿತ ಅವಿನಾಶ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಪ್ರಾಣಾಪಯವಿಲ್ಲದೆ ಪಾರಾಗಿದ್ದಾನೆ. ಇವರಿಬ್ಬರೂ ಮಂಗಳೂರು ಸಿಟಿ ಸೆಂಟರ್ ನಲ್ಲಿ ಉದ್ಯೋಗಿಗಳಾಗಿದ್ದು, ಬೆಳ್ತಂಗಡಿ ಸ್ನೇಹಿತನ ಮನೆಯಲ್ಲಿ ನಡೆಯುವ ಕೋಲಕ್ಕೆ ಹೋಗಿ ಅಲ್ಲಿಂದ ಸುಮಾರು 3.30 ಗಂಟೆ ವೇಳೆಗೆ ಬರುತ್ತಿರುವಾಗ ಬಿಸಿರೋಡಿನ ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ದ ಬಳಿ ಸುಮಾರು ಹತ್ತಕ್ಕೂ ಅಧಿಕ ಅಡಿ ಇರುವ ಆಳಕ್ಕೆ ಬಿದ್ದು ಬೈಕಿನ ಹಿಂಬದಿಯಲ್ಲಿ ಇದ್ದ ಸಹಸವಾರ ಯಶೋಧರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಮೆಲ್ಕಾರ್ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.