ಪುತ್ತೂರು: ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಮಾಸಿಕ ಗೌರವಧನವನ್ನು ದ್ವಿಗುಣಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ ಎಂ.ಎಸ್. ಬಾನೊಳಿ ಅವರು ಆದೇಶ ಹೊರಡಿಸಿದ್ದು, 2017ರ ಮೇ 5ರ ಆದೇಶದಂತೆ ರಾಜ್ಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳಗೊಳ್ಳಲಿದೆ.
ಇದುವರೆಗೆ ಗ್ರಾ.ಪಂ. ಅಧ್ಯಕ್ಷರಿಗೆ 3 ಸಾವಿರ ರೂ., ಉಪಾಧ್ಯಕ್ಷರಿಗೆ 2 ಸಾವಿರ ರೂ., ಸದಸ್ಯರಿಗೆ 1 ಸಾವಿರ ರೂ.ವನ್ನು ತಿಂಗಳ ಗೌರವಧನವಾಗಿ ನೀಡಲಾಗುತ್ತಿತ್ತು. ಇದು ತೀರಾ ಕಡಿಮೆಯಾಗಿದ್ದು, ಗೌರವಧನವನ್ನು ಹೆಚ್ಚಳಗೊಳಿಸಬೇಕು ಎಂಬ ಕೂಗು ಎಲ್ಲಾ ಗ್ರಾಮ ಪಂಚಾಯಿತಿಗಳಿಂದಲೂ ಕೇಳಿಬಂದಿತ್ತು. ಮಾತ್ರವಲ್ಲ, ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳಿಗೆ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಸಾಮಾನ್ಯ ಸಭೆಗಳಲ್ಲಿ ವ್ಯಕ್ತವಾಗುತ್ತಿತ್ತು. ಸದಸ್ಯರ ಬೇಡಿಕೆಗೆ ಕೊನೆಗೂ ರಾಜ್ಯ ಸರಕಾರ ಸಮ್ಮತಿ ನೀಡಿದೆ. ಇನ್ನು ಮುಂದೆ, ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ 3 ಸಾವಿರ ರೂ., ಉಪಾಧ್ಯಕ್ಷರಿಗೆ 4 ಸಾವಿರ ರೂ., ಸದಸ್ಯರಿಗೆ 2 ಸಾವಿರ ರೂ.ನಂತೆ ತಿಂಗಳ ಗೌರವಧನ ಸಿಗಲಿದೆ.