ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವೇಳೆ ಟೈರ್ ಸ್ಫೋಟಗೊಂಡ ಪರಿಣಾಮ ಟೆಕ್ಕಿಯೋರ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸಕೆರೆಹಳ್ಳಿ ಬಳಿಯ ನೈಸ್ ರಸ್ತೆಯಲ್ಲಿ ಸ್ಕೂಟರ್ ಟೈರ್ ಸ್ಫೋಟಗೊಂಡು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಾಪ್ಟ್ವೇರ್ ಇಂಜಿನಿಯರ್ ಸುಲೋಚನಾ(24) ಏ. 3 ರ ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಸುಮನ್ ಪನ್ನೇಕರ್ ತಿಳಿಸಿದ್ದಾರೆ.
ಕೋರಮಂಗಲದಿಂದ ಹೊಸಕೆರೆಹಳ್ಳಿ ಕಡೆಗೆ ಸುಲೋಚನಾ ಮತ್ತು ಆಕೆಯ ಸ್ನೇಹಿತ ಆನಂದ್ ಹೋಗುತ್ತಿದ್ದ ವೇಳೆ ಆನಂದ್ ಪೂರ್ಣ ಹೆಲ್ಮೇಟ್ ಧರಿಸಿದ್ದು, ಸುಲೋಚನಾ ಅರ್ಧ ಹೆಲ್ಮೆಟ್ ಧರಿಸಿದ್ದರು. ಇನ್ನು ನೈಸ್ ರಸ್ತೆಯಲ್ಲಿ ವೇಗವಾಗಿ ಹೋಗುವಾಗ ಸ್ಕೂಟರ್ನ ಟೈರ್ ಸ್ಪೋಟಗೊಂಡು ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದರು. ಸುಲೋಚನಾ ಅರ್ಧ ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ತೀವ್ರ ಹೊಡೆತ ಬಿದ್ದಿದ್ದು, ಕಿವಿಯಲ್ಲಿಯೂ ರಕ್ತಸ್ರಾವ ಉಂಟಾಗಿ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ಸುಲೋಚನಾ ಇಂದು ಬೆಳಗ್ಗಿನ ವೇಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಸುಲೋಚನಾ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆನಂದ್ ಪೂರ್ಣ ಹೆಲ್ಮೇಟ್ ಧರಿಸಿದ್ದರಿಂದ ಹೆಚ್ಚಿನ ಗಾಯಗಳಾಗದೇ, ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.