ನವದೆಹಲಿ: ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ, ಪಂಜಾಬಿನಲ್ಲಿ ಉಗ್ರವಾದ ಸಂಬಂಧಿ ಕುಕೃತ್ಯಗಳನ್ನು ನಡೆಸುವ ಸಂಚು ರೂಪಿಸುತ್ತಿದ್ದ 9 ಜನರನ್ನು ನವದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭೂಗತ ಪಾತ್ರ ದಾವೂದ್ ಇಬ್ರಾಹಿಂನ ತಂಡದ ಜೊತೆಗೆ ನಿಕಟ ಸಂಬಂಧ ಇರುವುದಾಗಿಯೂ ಮೂಲಗಳು ತಿಳಿಸಿವೆ.
ಬಂಧಿತ ಉಗ್ರರು ಬಹಳ ಸಮಯದಿಂದ ದೇಶದ ಪ್ರಮುಖ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು. ಇದೀಗ ಪೊಲೀಸರು ಈ ಸಂಚುಕೋರರನ್ನು ಬಂಧಿಸಿದ್ದು, ದೊಡ್ಡ ಪ್ರಮಾಣದ ಅಪಾಯವೊಂದನ್ನು ತಡೆದಂತಾಗಿದೆ. ಬಂಧಿತರಿಂದ ಪೋಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ಗಡಿಯಾಚೆಯ ಸಂಪರ್ಕಗಳು, ಹಣಕಾಸು ಮೂಲಗಳು ಹಾಗೂ ಈ ಮಾಡ್ಯೂಲ್ ಅನ್ನು ನಿರ್ದೇಶಿಸುತ್ತಿದ್ದ ವಿದೇಶಿ ಹ್ಯಾಂಡ್ಲರ್‌ಗಳ ಪಾತ್ರದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಜಾಲದ ಹಿಂದಿರುವ ದೊಡ್ಡ ಸಂಘಟನೆಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ನವದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಎಲ್ಲಾ ಜಿಲ್ಲಾ ಘಟಕಗಳಿಗೆ ಎಚ್ಚರಿಕೆ ನೀಡಲಾಗಿದೆ. ಕೇಂದ್ರ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಸಮನ್ವಯದಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
























