34 ಕೋಟಿ ರೂ ರಕ್ತನಿಧಿ ಪಾವತಿಯ ಬಳಿಕ ಕೇರಳದ ವ್ಯಕ್ತಿ ಬಿಡುಗಡೆ

ಕೊಲೆ ಆರೋಪದಲ್ಲಿ 20 ವರ್ಷ ರಿಯಾಧ್‌ ಜೈಲಿನಲ್ಲಿದ್ದ ಅಬ್ದುಲ್ ರಹೀಮ್

ಕೋಝಿಕ್ಕೋಡ್: ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ 20 ವರ್ಷಗಳಿಂದ ಮರಣದಂಡನೆ ಎದುರಿಸುತ್ತಿದ್ದ ಕೇರಳದ ಕೋಝಿಕ್ಕೋಡ್ ಸಮೀಪದ ರಾಮನಟ್ಟುಕರೆಯ ಕೊದಂಪುಳ ನಿವಾಸಿ ಅಬ್ದುಲ್ ರಹೀಮ್ ಸುಮಾರು 34 ಕೋಟಿ ರೂಪಾಯಿ ರಕ್ತನಿಧಿ (ಬ್ಲಡ್ ಮನಿ) ಪಾವತಿಸಿದ ನಂತರ ಬಿಡುಗಡೆಯಾಗಿ ಈದ್ ಹಬ್ಬದ ದಿನದಂದು ತಮ್ಮ ಸ್ವಗೃಹಕ್ಕೆ ಮರಳಿದ್ದಾರೆ. ವೃತ್ತಿಯಲ್ಲಿ ಚಾಲಕರಾಗಿದ್ದ ರಹೀಮ್ ಸೌದಿಗೆ ಹೋದ ಕೇವಲ ಒಂದು ತಿಂಗಳ ಒಳಗಾಗಿ ತಮ್ಮ ಮಾಲೀಕನ ಮಗನ ಜೀವ ರಕ್ಷಕ ಸಾಧನವನ್ನು (ಲೈಫ್ ಸಪೋರ್ಟ್ ಸಿಸ್ಟಮ್) ಅಜಾಗರೂಕತೆಯಿಂದ ಮುಟ್ಟಿದ್ದರು. ಇದು ಆ ಬಾಲಕನ ಸಾವಿಗೆ ಕಾರಣವಾಗಿತ್ತು.

ರಿಯಾಧ್‌ನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮೇ 28ರಂದು ಮುಂಜಾನೆ ಕೋಝಿಕ್ಕೋಡ್‌ನ ಕರಿಪುರ ಅತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಹೀಮ್ ಅವರನ್ನು ಮಾಚಿಲಕತ್‌ನಲ್ಲಿರುವ ಅವರ ಪೂರ್ವಜರ ಮನೆಯಲ್ಲಿ ಕುಟುಂಬಸ್ಥರು ಭಾವುಕರಾಗಿ ಬರಮಾಡಿಕೊಂಡರು.





















































 
 

ರಿಯಾಧ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ಎರಡು ದಶಕಗಳ ಜೈಲು ವಾಸದ ನಂತರ ಅಬ್ದುಲ್ ರಹೀಮ್ ಅವರನ್ನು ಮೇ 20 ರಂದು ಕ್ಷಮಿಸಿ ಬಿಡುಗಡೆ ಮಾಡಲಾಯಿತು. ಅವರು ಭಾರತಕ್ಕೆ ಪ್ರಯಾಣ ಬೆಳೆಸಿದ ಕೆಲವೇ ಕ್ಷಣಗಳ ಮೊದಲು ರಾಯಭಾರ ಕಚೇರಿ ಈ ಪ್ರಕಟಣೆಯನ್ನು ಹೊರಡಿಸಿತ್ತು.

ಘಟನೆಯ ಹಿನ್ನೆಲೆ

ಕೇರಳದಲ್ಲಿ ಶಾಲಾ ಬಸ್ ಮತ್ತು ಆಟೋರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದ ರಹೀಮ್ ಉತ್ತಮ ಭವಿಷ್ಯದ ಹುಡುಕಾಟದಲ್ಲಿ ನವೆಂಬರ್ 28, 2006ರಂದು ರಿಯಾಧ್‌ಗೆ ತೆರಳಿದ್ದರು. ಅಲ್ಲಿ ಅವರಿಗೆ ತಮ್ಮ ಮಾಲೀಕ ಫಯೀಸ್ ಅಬ್ದುಲ್ಲಾ ಅಬ್ದುಲ್ ರಹಮಾನ್ ಅಲ್ ಶಹ್ರಿ ಅವರ 17 ವರ್ಷದ ಪಾರ್ಶ್ವವಾಯು ಪೀಡಿತ ಮಗ ಅನಾಸ್ ಅಲ್ ಶಹ್ರಿಯನ್ನು ನೋಡಿಕೊಳ್ಳುವ ಕೆಲಸ ನೀಡಲಾಗಿತ್ತು. ಆ ಬಾಲಕ ಉಸಿರಾಟದ ಸಾಧನದ ನೆರವಿನಿಂದ ಬದುಕುತ್ತಿದ್ದನು.

ಡಿಸೆಂಬರ್ 24, 2006ರಂದು ರಹೀಮ್ ಕಾರು ಚಾಲನೆ ಮಾಡುತ್ತಿದ್ದಾಗ, ಅವರ ಕೈ ಆಕಸ್ಮಿಕವಾಗಿ ಬಾಲಕನಿಗೆ ಅಳವಡಿಸಲಾಗಿದ್ದ ವೈದ್ಯಕೀಯ ಸಾಧನಕ್ಕೆ ತಗುಲಿತ್ತು. ಇದರ ಬೆನ್ನಲ್ಲೇ ಬಾಲಕ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದನು. ಸೌದಿಗೆ ಬಂದ ಕೇವಲ 28 ದಿನಗಳಲ್ಲಿ ರಹೀಮ್ ಅವರನ್ನು ಬಂಧಿಸಲಾಯಿತು. ನಂತರ 2011ರಲ್ಲಿ ಸೌದಿ ನ್ಯಾಯಾಲಯವು ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಮೇಲ್ಮನವಿ ನ್ಯಾಯಾಲಯಗಳೂ ಈ ಶಿಕ್ಷೆಯನ್ನು ಎತ್ತಿಹಿಡಿದಿದ್ದವು. ವರ್ಷಗಳ ಕಾನೂನು ಹೋರಾಟದ ನಂತರ, 2024ರಲ್ಲಿ ಸಂತ್ರಸ್ತ ಬಾಲಕನ ಕುಟುಂಬವು 15 ಮಿಲಿಯನ್ ಸೌದಿ ರಿಯಾಲ್ (ಸುಮಾರು 34.35 ಕೋಟಿ ರೂ.) ರಕ್ತದ ಹಣವನ್ನು (ದಿಯಾ) ಪಡೆದುಕೊಂಡು ರಹೀಮ್ ಅವರನ್ನು ಕ್ಷಮಿಸಲು ಒಪ್ಪಿಕೊಂಡಿತು.

ದಿಯಾ ಎಂದರೇನು?

ಇಸ್ಲಾಮಿಕ್ ಕಾನೂನಿನ ಪ್ರಕಾರ, ಉದ್ದೇಶಪೂರ್ವಕವಲ್ಲದ ಕೊಲೆ, ದೈಹಿಕ ಹಾನಿ ಅಥವಾ ಆಸ್ತಿ ನಷ್ಟದ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಅಥವಾ ಅವರ ವಾರಸುದಾರರಿಗೆ ನೀಡಲಾಗುವ ಆರ್ಥಿಕ ಪರಿಹಾರವನ್ನು ‘ದಿಯಾ’ (ರಕ್ತನಿಧಿ) ಎನ್ನಲಾಗುತ್ತದೆ. ಸೌದಿ ಅರೇಬಿಯಾ, ಇರಾನ್, ಪಾಕಿಸ್ತಾನ ಮತ್ತು ಯುಎಇನಂತಹ ದೇಶಗಳ ಕಾನೂನು ಪ್ರಕ್ರಿಯೆಯಲ್ಲಿ ಇದು ಜಾರಿಯಲ್ಲಿದೆ.

ರಕ್ತನಿಧಿ ಒಪ್ಪಂದದ ನಂತರ ಸೌದಿ ನ್ಯಾಯಾಲಯ ಜುಲೈ 2, 2024ರಂದು ಮರಣದಂಡನೆಯನ್ನು ರದ್ದುಗೊಳಿಸಿತು. ಆದರೆ, ರಹೀಮ್ ಅವರ 20 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸುವಂತೆ ಸೌದಿ ಅಧಿಕಾರಿಗಳು ಆದೇಶಿಸಿದ್ದರು. ಅರೇಬಿಕ್ ಕ್ಯಾಲೆಂಡರ್ ಪ್ರಕಾರ ಈ ಶಿಕ್ಷೆಯ ಅವಧಿಯು ಮೇ 20ರಂದು ಮುಕ್ತಾಯಗೊಂಡಿತು.

ವಿಶ್ವದಾದ್ಯಂತ ಹರಿದುಬಂದ ಧನಸಹಾಯ

ಅಬ್ದುಲ್ ರಹೀಮ್ ಅವರ ಬಿಡುಗಡೆಗೆ ಅಗತ್ಯವಿದ್ದ ಬೃಹತ್ ಮೊತ್ತದ ರಕ್ತದ ಹಣವನ್ನು ಸಂಗ್ರಹಿಸುವಲ್ಲಿ ಮಲಯಾಳಿ ಸಮುದಾಯವು ಪ್ರಮುಖ ಪಾತ್ರ ವಹಿಸಿತು. ರಹೀಮ್ ಕುಟುಂಬಕ್ಕೆ ಈ ಮೊತ್ತವನ್ನು ಹೊಂದಿಸಲು ಸಾಧ್ಯವಾಗದಿದ್ದಾಗ, ಸೌದಿಯ ಮಲಯಾಳಿ ಸಂಘಟನೆಗಳು ಮತ್ತು ಕೇರಳದ ಬೆಂಬಲ ಗುಂಪುಗಳು ಜಂಟಿಯಾಗಿ “ಸೇವ್ ಅಬ್ದುಲ್ ರಹೀಮ್” ಅಭಿಯಾನವನ್ನು ಪ್ರಾರಂಭಿಸಿದವು. ಇದು ಕೇರಳದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾರ್ವಜನಿಕ ನಿಧಿ ಸಂಗ್ರಹಣಾ ಅಭಿಯಾನವಾಗಿ ಮಾರ್ಪಟ್ಟಿತು.

ವಿಶೇಷ ಮೊಬೈಲ್ ಆಪ್ ಮೂಲಕ 2024 ರ ಮಾರ್ಚ್ ಅಂತ್ಯದಿಂದ ಏಪ್ರಿಲ್ 12 ರ ಅವಧಿಯಲ್ಲಿ ಸಾಮಾನ್ಯ ಕಾರ್ಮಿಕರು ಮತ್ತು ಅನಿವಾಸಿ ಭಾರತೀಯರು ಸೇರಿದಂತೆ ಪ್ರಪಂಚದಾದ್ಯಂತದ ಜನರಿಂದ ಬರೋಬ್ಬರಿ 47.87 ಕೋಟಿಗೂ ಅಧಿಕ ರೂಪಾಯಿ ಹಣ ಸಂಗ್ರಹವಾಯಿತು. ಸೌದಿ ಅರೇಬಿಯಾದಲ್ಲಿದ್ದ 60ಕ್ಕೂ ಹೆಚ್ಚು ಮಲಯಾಳಿ ಸಂಘಟನೆಗಳು ಕಳೆದ ಎರಡು ದಶಕಗಳಿಂದ ಈ ಕಾನೂನು ಹೋರಾಟವನ್ನು ಸಂಘಟಿಸಿದ್ದರೆ, ಕೇರಳದ ಸ್ಥಳೀಯ ಸಮಿತಿಗಳು ಹಣದ ಉಸ್ತುವಾರಿ ಮತ್ತು ಪ್ರಚಾರವನ್ನು ನೋಡಿಕೊಂಡಿದ್ದವು.

error: Content is protected !!
Scroll to Top