ಇಂದು ಸಂಜೆ ಕಾಂಗ್ರೆಸಿನ ಮಹತ್ವದ ಸಿಎಲ್‌ಪಿ ಸಭೆ : ಮುಖ್ಯಮಂತ್ರಿಯ ಅಧಿಕೃತ ಘೋಷಣೆ

ವಿಧಾನಸೌಧದ ಮೆಟ್ಟಿಲುಗಳ ಪ್ರಮಾಣವಚನ ಸ್ವೀಕರ ಸಾಧ್ಯತೆ

ಬೆಂಗಳೂರು : ಸಿದ್ದರಾಮಯ್ಯ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ ಬೆನ್ನಲ್ಲೇ ಮುಂದಿನ ಜವಾಬ್ದಾರಿ ವಹಿಸಿಕೊಳ್ಳಲು ಕಾಂಗ್ರೆಸ್ ಪಾಳಯದಲ್ಲಿ ಭರ್ಜರಿ ಕಸರತ್ತು ಆರಂಭವಾಗಿದೆ. ಇಡೀ ರಾಜ್ಯದ ದೃಷ್ಟಿ ಇಂದು ಸಂಜೆ ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯತ್ತ ನೆಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರೇ ಮುಖ್ಯಮಂತ್ರಿ ಹುದ್ದೆಗೆ ಬಹುತೇಕ ಅಂತಿಮವಾಗಿದ್ದು, ಇಂದಿನ ಸಭೆಯಲ್ಲಿ ಹೈಕಮಾಂಡ್ ಅಧಿಕೃತ ತೀರ್ಮಾನವನ್ನು ಪ್ರಕಟಿಸಲಿದೆ.

ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ನೂತನ ಸಿಎಲ್‌ಪಿ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಎಐಸಿಸಿ ನಾಯಕರ ಸಮ್ಮುಖದಲ್ಲಿ ಹೈಕಮಾಂಡ್ ತೀರ್ಮಾನವನ್ನು ಪ್ರಕಟಿಸಲಾಗುತ್ತದೆ. ನೂತನ ಸರ್ಕಾರ ಹಾಗೂ ಸಂಪುಟ ರಚನೆಗೆ ಡಿ.ಕೆ.ಶಿವಕುಮಾರ್ ಈಗಾಗಲೇ ಭರ್ಜರಿ ನೀಲಿನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಗೆ ತೆರಳುವಾಗ ವಿಮಾನದಲ್ಲೇ ಸಂಭಾವ್ಯ ಸಚಿವರ ಪಟ್ಟಿಯನ್ನು ಹಿಡಿದು ಪರಿಶೀಲನೆ ನಡೆಸಿದ್ದ ಡಿಕೆಶಿ, ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ಡಿಕೆಶಿ, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದಿದ್ದಾರೆ. ಆದಾಗ್ಯೂ, ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಪಟ್ಟಿಯನ್ನು ಅವರು ಗೌಪ್ಯವಾಗಿಟ್ಟಿದ್ದಾರೆ.





















































 
 

ಇನ್ನೊಂದೆಡೆ ನೂತನ ಮುಖ್ಯಮಂತ್ರಿಯ ಪದಗ್ರಹಣ ಸಮಾರಂಭವನ್ನು ವಿಧಾನಸೌಧದ ಮುಂಭಾಗ ನಡೆಸಬೇಕೆ ಅಥವಾ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಬೇಕೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಭವ್ಯ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಲು ಡಿಕೆಶಿ ತಮ್ಮ ಆಪ್ತ ರಾಜಗುರು ದ್ವಾರಕನಾಥ್ ಅವರ ಬಳಿ ಸಮಯ ಕೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ದ್ವಾರಕನಾಥ್, ಜೂನ್ 5, 6 ಮತ್ತು 7 ರಂದು ಅತ್ಯಂತ ಶುಭದಾಯಕವಾದ ಮೂರು ದಿನಾಂಕಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ಡಿಕೆಶಿ ಮುಖ್ಯಮಂತ್ರಿಯಾಗುತ್ತಿರುವುದು ಅವರ ಅಭಿಮಾನಿ ವಲಯದಲ್ಲಿ ಭಾರಿ ಹರ್ಷ ತಂದಿದ್ದು, ಯಾವುದೇ ವಿಘ್ನ ಎದುರಾಗದಿರಲಿ ಎಂದು ರಾಜ್ಯದ ಹಲವೆಡೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿಸಲಾಗುತ್ತಿದೆ. ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ‘ಪ್ರಮಾಣವಚನ ಸಮಾರಂಭಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯಿಂದಲೇ 50 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಭಾಗವಹಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

error: Content is protected !!
Scroll to Top