ಸಮುದ್ರ ಮಧ್ಯೆ ಲಂಗರು ಹಾಕಿ ಮಾದಕ ವಸ್ತು ವಿಲೇವಾರಿ ಮಾಡುತ್ತಿದ್ದಾಗ ಕಾರ್ಯಾಚರಣೆ
ಅಹಮದಾಬಾದ್: ಗುಜರಾತ್ನ ಮುದ್ರಾ ಕರಾವಳಿ ತೀರದಲ್ಲಿ ಭಾರತೀಯ ತಟರಕ್ಷಕ ಪಡೆ (ಐಸಿಜಿ) ಮತ್ತು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ, ಸರಕು ಸಾಗಣೆ ಹಡಗೊಂದರಿಂದ ಸುಮಾರು 1,150 ಕೋಟಿ ರೂಪಾಯಿ ಮೌಲ್ಯದ 115 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ.
ಸಮುದ್ರ ಮಾರ್ಗದ ಮೂಲಕ ಮಾದಕ ದ್ರವ್ಯ ಸಾಗಾಟವಾಗುತ್ತಿರುವ ಬಗ್ಗೆ ಗುಜರಾತ್ ಎಟಿಎಸ್ ನೀಡಿದ ನಿಖರವಾದ ಗುಪ್ತಚರ ಮಾಹಿತಿ ಆಧಾರದ ಮೇಲೆ, ಮೇ 26ರ ಮಧ್ಯರಾತ್ರಿ ಈ ಜಂಟಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.
ಮುದ್ರಾ ಕರಾವಳಿಯಿಂದ ಸುಮಾರು ಐದು ನಾಟಿಕಲ್ ಮೈಲಿ ದೂರದಲ್ಲಿ ಲಂಗರು ಹಾಕಿದ್ದ ‘ಎಂವಿ ಯುರೋಪ್’ ಎಂಬ ಸಂಶಯಾಸ್ಪದ ಸರಕು ಸಾಗಣೆ ಹಡಗಿನಲ್ಲಿ ಚಟುವಟಿಕೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಎಟಿಎಸ್ ಸಿಬ್ಬಂದಿಯನ್ನು ಹೊತ್ತ ಐಸಿಜಿ ಇಂಟರ್ಸೆಪ್ಟರ್ ಬೋಟ್ಗಳು ಮುದ್ರಾ ಆಂಕೊರೇಜ್ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯವನ್ನು ಆರಂಭಿಸಿದವು.
ಕತ್ತಲಲ್ಲಿ ಹಡಗಿನಿಂದ ಕೆಲವು ಬ್ಯಾಗ್ಗಳನ್ನು ಸಮುದ್ರಕ್ಕೆ ಎಸೆಯುತ್ತಿರುವುದನ್ನು ಜಂಟಿ ತಂಡವು ಗಮನಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಐಸಿಜಿ ಮತ್ತು ಎಟಿಎಸ್ ಸಿಬ್ಬಂದಿ, ಕನಿಷ್ಠ ದೃಷ್ಟಿಗೋಚರತೆ (ಕಡಿಮೆ ಬೆಳಕು) ಇದ್ದಾಗಲೂ ಸಮುದ್ರದಿಂದ ಐದು ಬ್ಯಾಗ್ಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡರು.
ಆ ಬ್ಯಾಗ್ಗಳನ್ನು ಪರಿಶೀಲಿಸಿದಾಗ, ತಲಾ ಒಂದು ಕಿಲೋಗ್ರಾಂ ತೂಕದ ಬಿಳಿ ಪುಡಿಯನ್ನೊಳಗೊಂಡ 115 ಪ್ಯಾಕೆಟ್ಗಳು ಪತ್ತೆಯಾಗಿವೆ. ಪ್ರಾಥಮಿಕ ಪರೀಕ್ಷೆಗಳಲ್ಲಿ ಆ ಪುಡಿಯು ಕೊಕೇನ್ ಎಂದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಕ್ತ ಮಾರುಕಟ್ಟೆಯ ಅಂದಾಜಿನ ಪ್ರಕಾರ, ವಶಪಡಿಸಿಕೊಳ್ಳಲಾದ ಒಟ್ಟು 115 ಕೆಜಿ ನಿಷೇಧಿತ ಮಾದಕ ದ್ರವ್ಯದ ಅಂತಾರಾಷ್ಟ್ರೀಯ ಮೌಲ್ಯ ಸುಮಾರು 1,150 ಕೋಟಿ ರೂಪಾಯಿಗಳಾಗಿದೆ. ಸದ್ಯ ಹಡಗನ್ನು ಹೆಚ್ಚಿನ ತನಿಖೆಗಾಗಿ ಬಂದರಿಗೆ ತರಲಾಗಿದ್ದು, ಐಸಿಜಿ, ಗುಜರಾತ್ ಎಟಿಎಸ್ ಮತ್ತು ಇತರ ಸಂಸ್ಥೆಗಳು ಜಂಟಿ ತನಿಖೆ ನಡೆಸುತ್ತಿವೆ.
ಈ ಕೊಕೇನ್ ಅನ್ನು ಬ್ರೆಝಿಲ್ ನಲ್ಲಿ ಹಡಗಿಗೆ ಹೇರಲಾಗಿತ್ತು. ಹಡಗು ಕಚ್ ತಲುಪುವ ಮುನ್ನ ಹಲವು ಅಂತರರಾಷ್ಟ್ರೀಯ ಜಲಮಾರ್ಗಗಳ ಮೂಲಕ ಹಾದು ಬಂದಿದೆ. ಹಡಗಿನಲ್ಲಿ ತರಲಾದ ಕೊಕೇನ್ ಅನ್ನು ದಿಲ್ಲಿಯಲ್ಲಿರುವ ವಿದೇಶಿ ಪ್ರಜೆಗಳಿಗೆ ತಲುಪಿಸಲು ಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. ಈ ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಶಂಕಿತ ಆರೋಪಿ ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡಿದ್ದಾನೆ.
ದೆಹಲಿಯಲ್ಲಿರುವ ತಾಂಜಾನಿಯಾ ಮತ್ತು ಉಗಾಂಡಾ ಮೂಲದ ಇಬ್ಬರು ವ್ಯಕ್ತಿಗಳಿಗೆ ತಲುಪಿಸಲು ವಿದೇಶಿ ಪ್ರಜೆಗಳು ಈ ಮಾದಕ ದ್ರವ್ಯದ ಸರಕನ್ನು ಹಡಗಿನಲ್ಲಿ ತಂದಿದ್ದರು ಎಂದು ತಿಳಿದುಬಂದಿದೆ. ಕಳೆದ ಐದು ವರ್ಷಗಳಲ್ಲಿ ಐಸಿಜಿ ಮತ್ತು ಗುಜರಾತ್ ಎಟಿಎಸ್ ಜಂಟಿಯಾಗಿ ನಡೆಸಿದ 15ನೇ ಯಶಸ್ವಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
























