ಪಶ್ಚಿಮ ಬಂಗಾಳದ ಗಡಿಭಾಗಗಳಲ್ಲಿ ಸಾಲುಗಟ್ಟಿ ನಿಂತ ಬಾಂಗ್ಲಾದೇಶಿ ಅಕ್ರಮ ವಲಸಿಗರು

ಡಿಟೆಕ್ಟ್‌-ಡಿಲೀಟ್‌-ಡಿಪೊರ್ಟ್‌ ನೀತಿ ಘೋಷಣೆಯಾದ ಬಳಿಕ ತಾಯ್ನಾಡಿಗೆ ಧಾವಿಸುತ್ತಿರುವ ಅಕ್ರಮ ವಲಸಿಗರು

ಕೋಲ್ಕತ್ತಾ: ಬಿಜೆಪಿ ಸರ್ಕಾರದ ನೂತನ “ಪತ್ತೆ ಹಚ್ಚಿ, ಪಟ್ಟಿಯಿಂದ ಹೆಸರು ಅಳಿಸಿ ಮತ್ತು ಗಡೀಪಾರು ಮಾಡಿ” (detect, delete and deport) ನೀತಿಯ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಹಲವು ಗಡಿ ಪ್ರದೇಶಗಳಿಗೆ ಅಕ್ರಮ ಬಾಂಗ್ಲಾದೇಶಿ ವಲಸಿಗರು ಎನ್ನಲಾದ ಅಪಾರ ಸಂಖ್ಯೆಯ ಜನರು ಲಗ್ಗೆ ಇಡುತ್ತಿದ್ದಾರೆ. ಉತ್ತರ 24 ಪರಗಣ ಮತ್ತು ಮಾಲ್ಡಾ ಜಿಲ್ಲೆಗಲ್ಲಿ ಕಂಡುಬರುತ್ತಿರುವ ದೃಶ್ಯಗಳು, ನುಸುಳುಕೋರ ವಿರೋಧಿ ಅಭಿಯಾನ ಕೇವಲ ರಾಜಕೀಯ ಭಾಷಣಕ್ಕೆ ಸೀಮಿತವಾಗದೆ ಆಡಳಿತಾತ್ಮಕವಾಗಿ ಜಾರಿಗೆ ಬರುತ್ತಿರುವುದನ್ನು ಸೂಚಿಸುತ್ತಿವೆ.

ಉತ್ತರ 24 ಪರಗಣದ ಬಸಿರ್ಹತ್ ಉಪವಿಭಾಗದ ಹಕಿಂಪುರ ಚೆಕ್‌ಪಾಯಿಂಟ್ ಬಳಿ ಮಂಗಳವಾರ ಮುಂಜಾನೆ ನೂರಕ್ಕೂ ಹೆಚ್ಚು ಬಾಂಗ್ಲಾದೇಶಿ ಪುರುಷರು ಮತ್ತು ಮಹಿಳೆಯರು ಅಂತಾರಾಷ್ಟ್ರೀಯ ಗಡಿ ದಾಟಿ ತಮ್ಮ ದೇಶಕ್ಕೆ ಮರಳಲು ಜಮಾಯಿಸಿದ್ದರು. ಇವರಲ್ಲಿ ಹಲವರು ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದರು ಎನ್ನಲಾಗಿದ್ದು, ಇತ್ತೀಚೆಗೆ ಸರ್ಕಾರವು ಗಡೀಪಾರು ಮತ್ತು ಬಂಧನ ಕೇಂದ್ರಗಳನ್ನು (holding centres) ಸ್ಥಾಪಿಸುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಗಡಿಭಾಗದತ್ತ ಧಾವಿಸಿದ್ದಾರೆ.





















































 
 

ರಾಜ್ಯದಲ್ಲಿ ನುಸುಳುಕೋರರ ವಿರುದ್ಧ “ಪತ್ತೆ ಹಚ್ಚಿ, ಪಟ್ಟಿಯಿಂದ ಹೆಸರು ಅಳಿಸಿ ಮತ್ತು ಗಡೀಪಾರು ಮಾಡಿ” ನೀತಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ಘೋಷಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಬಿಎಸ್‌ಎಫ್ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ್ದ ಸುವೇಂದು ಅಧಿಕಾರಿ, “ಪೌರತ್ವ ತಿದ್ದುಪಡಿ ಕಾಯ್ದೆ ವ್ಯಾಪ್ತಿಗೆ ಬರದ ಎಲ್ಲರನ್ನೂ ಅಕ್ರಮ ನುಸುಳುಕೋರರು ಎಂದು ಪರಿಗಣಿಸಲಾಗುವುದು. ಅಂತಹವರನ್ನು ರಾಜ್ಯ ಪೊಲೀಸರು ಬಂಧಿಸಿ ಬಿಎಸ್‌ಎಫ್‌ಗೆ ಒಪ್ಪಿಸಲಿದ್ದಾರೆ” ಎಂದು ಹೇಳಿದ್ದರು.

ಅಕ್ರಮ ವಲಸಿಗರನ್ನು ತಾತ್ಕಾಲಿಕವಾಗಿ ಇರಿಸಲು ಮತ್ತು ಗಡೀಪಾರು ಮಾಡಲು ಕಾಯುತ್ತಿರುವ ವಿದೇಶಿ ಕೈದಿಗಳನ್ನು ಇರಿಸಲು ರಾಜ್ಯ ಸರ್ಕಾರವು ವಿವಿಧ ಜಿಲ್ಲೆಗಳಲ್ಲಿ ಬಂಧನ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಗೃಹ ಮತ್ತು ಗಿರಿಪ್ರದೇಶ ವ್ಯವಹಾರಗಳ ಇಲಾಖೆಯ ವಿದೇಶಿಯರ ವಿಭಾಗವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಈ ಕ್ರಮ ಕೈಗೊಂಡಿದೆ. ಈ ಪೈಕಿ ಮಾಲ್ಡಾ ಜಿಲ್ಲೆಯಲ್ಲಿ ಇಂತಹ ಮೊದಲ ಕೇಂದ್ರ ಕಾರ್ಯಾರಂಭ ಮಾಡಿದೆ.

ದಾಖಲೆಗಳ ಪರಿಶೀಲನೆ ಮತ್ತು ರಾಷ್ಟ್ರೀಯತೆಯನ್ನು ನಿರ್ಧರಿಸುವವರೆಗೆ ಇವು ತಾತ್ಕಾಲಿಕ ಆಶ್ರಯತಾಣಗಳಾಗಿ ಕಾರ್ಯನಿರ್ವಹಿಸಲಿವೆ. ಹೊಸ ನಿಯಮಾವಳಿಗಳ ಪ್ರಕಾರ, ಶಂಕಿತರನ್ನು 30 ದಿನಗಳವರೆಗೆ ಇಲ್ಲಿ ಇರಿಸಬಹುದಾಗಿದ್ದು, ಈ ಅವಧಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರುಗಳು ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಿ ಕೇಂದ್ರ ದತ್ತಸಂಚಯಕ್ಕೆ ಅಪ್‌ಲೋಡ್ ಮಾಡಲಿದ್ದಾರೆ.

ಈ ಇಡೀ ಪ್ರಕ್ರಿಯೆ ಹಳೆಯ ವಲಸೆ ಕಾಯ್ದೆಗಳನ್ನು ಬದಲಿಸಿ ತರಲಾದ ‘ವಲಸೆ ಮತ್ತು ವಿದೇಶಿಯರ ಕಾಯ್ದೆ, 2025’ರ (Immigration and Foreigners Act, 2025) ಅಡಿಯಲ್ಲಿ ನಡೆಯುತ್ತಿದೆ. ಈ ಹೊಸ ಕಾನೂನು ತಂತ್ರಜ್ಞಾನ ಆಧಾರಿತ ಕಣ್ಗಾವಲು ಮತ್ತು ಗಡೀಪಾರು ವ್ಯವಸ್ಥೆಯನ್ನು ಪರಿಚಯಿಸಿದ್ದು, ಹೆಡ್‌ಕಾನ್‌ಸ್ಟೆಬಲ್ ಮತ್ತು ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಪೊಲೀಸ್ ಅಧಿಕಾರಿಗಳಿಗೆ ವಾರಂಟ್ ಇಲ್ಲದೆಯೇ ಶಂಕಿತರನ್ನು ಬಂಧಿಸುವ ಅಧಿಕಾರ ನೀಡಿದೆ.

error: Content is protected !!
Scroll to Top