ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿದ ಪೊಲೀಸರು

ಹಾಸನದಿಂದ ಬಂದು ಕೂಳೂರಿನಲ್ಲಿ ನದಿಗೆ ಹಾರಲು ಮುಂದಾಗಿದ್ದ ಕೃಷಿಕ

ಮಂಗಳೂರು: ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪಣಂಬೂರು ಪೊಲೀಸರು ಸಮಯ ಪ್ರಜ್ಞೆಯಿಂದ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ಗ್ರಾಮದ ನಿವಾಸಿಯಾಗಿರುವ ಕೃಷಿಕನೊಬ್ಬ ಆರೋಗ್ಯ ಸಮಸ್ಯೆ ಹಾಗೂ ಹಣಕಾಸಿನ ತೊಂದರೆಯಿಂದ ಮನನೊಂದು ಮೇ 22ರಂದು ಬೆಳಗ್ಗೆ ಮನೆಯಿಂದ ಯಾರಿಗೂ ತಿಳಿಸದೇ ಹೊರಟು ಮಂಗಳೂರಿಗೆ ಬಂದಿದ್ದರು. ಮೊಬೈಲ್ ಫೋನ್ ಮಾತ್ರ ಆನ್‌ನಲ್ಲಿ ಇಟ್ಟುಕೊಂಡಿದ್ದ ಆತ, ಕುಟುಂಬದವರು ಮತ್ತು ಸಂಬಂಧಿಕರು ಕರೆ ಮಾಡಿ ಮನೆಗೆ ವಾಪಸ್ ಬರಲು ಮನವಿ ಮಾಡಿದರೂ ತನ್ನ ಇರುವಿಕೆ ಬಗ್ಗೆ ತಿಳಿಸದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಬಳಿಕ ವ್ಯಕ್ತಿ ಪಣಂಬೂರು ಬೀಚ್ ಸಮೀಪದಲ್ಲಿರುವ ಮಾಹಿತಿ ಪಡೆದ ಸಂಬಂಧಿಕರು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮೂಲಕ ಸಂಜೆ ವೇಳೆಗೆ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ಅವರನ್ನು ಸಂಪರ್ಕಿಸಿ ನೆರವು ಕೋರಿದರು. ಕೂಡಲೇ ಪೊಲೀಸರು ಮೇಲಧಿಕಾರಿಗಳ ಗಮನಕ್ಕೆ ವಿಷಯ ತಂದು ತಂಡದೊಂದಿಗೆ ಕಾರ್ಯಾಚರಣೆ ಆರಂಭಿಸಿದರು. ಪೊಲೀಸ್ ಕಮೀಷನರೇಟ್ ತಾಂತ್ರಿಕ ಘಟಕದ ಸಹಕಾರದೊಂದಿಗೆ ವ್ಯಕ್ತಿಯ ಮೊಬೈಲ್ ಸ್ಥಳ ಮಾಹಿತಿ ಆಧರಿಸಿ ಹುಡುಕಾಟ ನಡೆಸಲಾಯಿತು. ಇದೇ ವೇಳೆ ದೂರವಾಣಿ ಮೂಲಕ ಸಂಪರ್ಕಿಸಿ ಕೌನ್ಸೆಲಿಂಗ್ ಮೂಲಕ ಮನವೊಲಿಸುವ ಪ್ರಯತ್ನ ನಡೆಸಿದರೂ ವ್ಯಕ್ತಿ ಸ್ಪಂದಿಸಿರಲಿಲ್ಲ.





















































 
 

ಸುಮಾರು ಒಂದೂವರೆ ಗಂಟೆಗಳ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಸಂಜೆ 7 ಗಂಟೆ ಸುಮಾರಿಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿ ಸುರಕ್ಷಿತವಾಗಿ ರಕ್ಷಿಸಿದರು. ವ್ಯಕ್ತಿ ಪತ್ತೆಯಾದ ಸ್ಥಳ ಕಾವೂರು ಠಾಣಾ ವ್ಯಾಪ್ತಿಗೆ ಸೇರಿದ್ದರೂ, ಜೀವ ಉಳಿಸುವ ಉದ್ದೇಶದಿಂದ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅವರನ್ನು ಪಣಂಬೂರು ಠಾಣೆಗೆ ಕರೆತಂದು ಆಹಾರ, ನೀರು ನೀಡಿ ಕೌನ್ಸೆಲಿಂಗ್ ನಡೆಸಿದರು. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ ಎಂಬ ಅರಿವು ಮೂಡಿಸಿ ಆತ್ಮವಿಶ್ವಾಸ ತುಂಬಿದ ಬಳಿಕ ಸಂಬಂಧಿಕರ ಜೊತೆ ಊರಿಗೆ ಕಳುಹಿಸಿಕೊಡಲಾಯಿತು. ತಮ್ಮ ಕುಟುಂಬ ಸದಸ್ಯರ ಜೀವ ಉಳಿಸಿದ ಪಣಂಬೂರು ಪೊಲೀಸರ ಕಾರ್ಯಕ್ಕೆ ಸಂಬಂಧಿಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ತಂದೆ ಹಾಗೂ ನಾಲ್ಕು ವರ್ಷದ ಬಾಲಕಿಯ ಜೀವ ರಕ್ಷಿಸಿದ್ದ ಪಣಂಬೂರು ಪೊಲೀಸರ ಮಾನವೀಯ ಕಾರ್ಯಕ್ಕೂ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಮತ್ತೊಮ್ಮೆ ಸಕಾಲಿಕ ಕಾರ್ಯಾಚರಣೆಯಿಂದ ಅಮೂಲ್ಯ ಜೀವ ಉಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

error: Content is protected !!
Scroll to Top