ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ಮಾವನಿಗೆ ಪಂಗನಾಮ ಹಾಕಿದ ಅಳಿಯ
ಉಡುಪಿ: ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 15.81 ಲಕ್ಷ ರೂ. ಪಡೆದು ವಂಚನೆ ಎಸಗಿರುವ ಆರೋಪದಡಿ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಗುಬೆಟ್ಟು ಗ್ರಾಮದ ನಿವಾಸಿ ಇಫ್ರಾನ್ ಅಜೀಜ್ (50) ನೀಡಿದ ದೂರಿನಂತೆ, ಅವರ ಅಳಿಯನಾದ ಮೊಹಮ್ಮದ್ ಶರ್ಪದ್ದೀನ್ ಕತಾರ್ನಲ್ಲಿ ಉದ್ಯೋಗದಲ್ಲಿದ್ದು, 2023ರ ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಆಮದು ಮಾಡಿ ಮಾರಾಟ ಮಾಡುವ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
ಬಳಿಕ ಡಿಸೆಂಬರ್ 2024ರಲ್ಲಿ ಆರೋಪಿಯು ದೂರವಾಣಿ ಮೂಲಕ ಸಂಪರ್ಕಿಸಿ, ಕೇರಳದ ತ್ರಿಶ್ಶೂರು ಜಿಲ್ಲೆಯ ಮೊಹಮ್ಮದ್ ಶಾಹಿದ್ ಹಾಗೂ ತಮಿಳುನಾಡಿನ ವಿಲ್ಲಾಪುರಂ ಜಿಲ್ಲೆಯ ಶಮೀಮ್ ಬಾನು ಅವರೊಂದಿಗೆ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುತ್ತಿರುವುದಾಗಿ ನಂಬಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳ ಮಾತು ನಂಬಿದ ಇಫ್ರಾನ್ ಅಜೀಜ್ 2025ರ ಜನವರಿ 13 ಮತ್ತು 15ರಂದು ಒಟ್ಟು 15,81,000 ರೂ. ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಬಳಿಕ ಯಾವುದೇ ಸರಕು ಕಳುಹಿಸದೆ ಆರೋಪಿಗಳು ಸಂಪರ್ಕಕ್ಕೂ ಸಿಗದೆ ವಂಚನೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
























