ಬಂದೂಕುಧಾರಿಯನ್ನು ಹೊಡೆದುರುಳಿದ ಭದ್ರತಾ ಸಿಬ್ಬಂದಿ
ವಾಷಿಂಗ್‌ಟನ್ : ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾದ ಶ್ವೇತಭವನದ ಬಳಿ ಗುಂಡಿನ ದಾಳಿ ನಡೆದಿದ್ದು, ಪೆನ್ಸಿಲ್ವೇನಿಯಾ ಅವೆನ್ಯೂ NW ಬಳಿ ಫೈರಿಂಗ್ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು. ಶ್ವೇತಭವನದ ಹೊರಗೆ ಶಂಕಿತ 20 ಸುತ್ತು ಗುಂಡು ಹಾರಿಸಿದ್ದು. ಅಮೆರಿಕದ ಭದ್ರತಾ ಪಡೆಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಅಮೆರಿಕದ ಸೀಕ್ರೆಟ್ ಸರ್ವಿಸ್ ಶನಿವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಂಜೆ ಸುಮಾರು 6 ಗಂಟೆಯ ನಂತರ ವ್ಯಕ್ತಿಯೋರ್ವ ಭದ್ರತಾ ತಪಾಸಣಾ ಕೇಂದ್ರದತ್ತ ಬಂದು ತನ್ನ ಬ್ಯಾಗಿನಿಂದ ಗನ್ ತೆಗೆದು ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಬಂದೂಕುಧಾರಿ ಹತನಾಗಿದ್ದಾನೆ
ಪ್ರಾಥಮಿಕ ತನಿಖೆಯ ಪ್ರಕಾರ, ಶ್ವೇತಭವನದ ಪರಿಮಿತಿಯ ಹೊರಗಿರುವ 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಎನ್‌ಡಬ್ಲ್ಯೂ ಛೇದಕದ ಬಳಿ ಈ ಘಟನೆ ನಡೆದಿದೆ. ಅನುಮಾನಾಸ್ಪದ ವ್ಯಕ್ತಿಯೊಬ್ಬ ತಪಾಸಣಾ ಚೌಕಿಯನ್ನು ತಲುಪಿ, ತನ್ನ ಬ್ಯಾಗ್‌ನಿಂದ ಶಸ್ತ್ರಾಸ್ತ್ರವನ್ನು ಹೊರತೆಗೆದು ಅಲ್ಲಿದ್ದ ಅಧಿಕಾರಿಗಳ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ದುಷ್ಕರ್ಮಿಯ ಮೇಲೆ ಎದುರು ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಗುಂಡಿನ ಚಕಮಕಿಯ ನಡುವೆ ಅಲ್ಲೇ ಇದ್ದ ಸಾರ್ವಜನಿಕರೊಬ್ಬರಿಗೂ ಗುಂಡೇಟು ತಗುಲಿದೆ. ಆದರೆ ಅವರಿಗೆ ತಗುಲಿದ ಗುಂಡು ದುಷ್ಕರ್ಮಿ ಹಾರಿಸಿದ್ದೋ ಅಥವಾ ಭದ್ರತಾ ಸಿಬ್ಬಂದಿ ಹಾರಿಸಿದ್ದೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಗಾಯಾಳುವಿನ ಪ್ರಸ್ತುತ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು ಈ ಘಟನೆಯಲ್ಲಿ ಸೀಕ್ರೆಟ್ ಸರ್ವಿಸ್‌ನ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಗುಂಡಿನ ದಾಳಿ ನಡೆದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದ ಒಳಗೇ ಇದ್ದರು. ಆದರೆ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಮತ್ತು ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಇರಾನ್ ದೇಶದೊಂದಿಗಿನ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಒಪ್ಪಂದದ ಮಾತುಕತೆಗಳಿಗಾಗಿ ಟ್ರಂಪ್ ಮತ್ತು ಅವರ ಹಿರಿಯ ಅಧಿಕಾರಿಗಳು ವಾರಾಂತ್ಯದ ಸಭೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಘಟನೆಯ ಬೆನ್ನಲ್ಲೇ ಅಧ್ಯಕ್ಷರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಘಟನೆಯ ನಂತರ ಶ್ವೇತಭವನದಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರ ಸಜ್ಜಿತ ಏಜೆಂಟ್‌ಗಳನ್ನು ನಿಯೋಜಿಸಲಾಗಿದೆ. ಶ್ವೇತಭವನದ ಮೇಲ್ಛಾವಣಿಯ ಮೇಲೆ ಸೀಕ್ರೆಟ್ ಸರ್ವಿಸ್‌ನ ಸ್ನೈಪರ್ (ನಿಖರ ಗುರಿಗಾರರು) ತಂಡಗಳನ್ನು ತಕ್ಷಣವೇ ನಿಯೋಜಿಸಿ ಕಣ್ಗಾವಲು ಇಡಲಾಗಿದೆ. ಪ್ರಸ್ತುತ ಎಫ್‌ಬಿಐ ಸಂಸ್ಥೆಯು ಸ್ಥಳದಲ್ಲಿ ಸೀಕ್ರೆಟ್ ಸರ್ವಿಸ್‌ಗೆ ತನಿಖೆಯಲ್ಲಿ ಸಹಾಯ ಮಾಡುತ್ತಿದೆ ಎಂದು ಕಾಶ್ ಪಟೇಲ್ ತಿಳಿಸಿದ್ದಾರೆ.
ಕಳೆದ ಏಪ್ರಿಲ್ 25ರಂದು ವಾಷಿಂಗ್ಟನ್ ಹೋಟೆಲ್‌ನಲ್ಲಿ ನಡೆದ ವಾರ್ಷಿಕ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ಡಿನ್ನರ್ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ನಡೆದಿದ್ದ ಸಂಚನ್ನು ಭದ್ರತಾ ಸಂಸ್ಥೆಗಳು ವಿಫಲಗೊಳಿಸಿದ್ದವು. ಆ ಘಟನೆ ನಡೆದು ಕೇವಲ ಒಂದು ತಿಂಗಳು ಕಳೆಯುವ ಮುನ್ನವೇ ಶ್ವೇತಭವನದ ಹೊರಗೆ ಮತ್ತೊಂದು ಸಶಸ್ತ್ರ ದಾಳಿ ನಡೆದಿರುವುದು ತೀವ್ರ ಆತಂಕ ಮೂಡಿಸಿದೆ. ಹತ್ಯೆಯ ಸಂಚಿನ ಆರೋಪದ ಮೇಲೆ ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ ಕೋಲ್ ಟೋಮಸ್ ಅಲೆನ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದ್ದು, ಆತ ಪ್ರಸ್ತುತ ಫೆಡರಲ್ ಕಸ್ಟಡಿಯಲ್ಲಿದ್ದಾನೆ.
























