ಜೂ.1ರಿಂದ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ಮಂಗಳೂರು: ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರನ್ವಯ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಕರ್ನಾಟಕ ಕರಾವಳಿಯಲ್ಲಿ ಎರಡು ತಿಂಗಳು ಮಳೆಗಾಲದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಜಾರಿಗೆ ಬರಲಿದೆ. ಯಾಂತ್ರೀಕೃತ ದೋಣಿಗಳು ಮತ್ತು 10 ಅಶ್ವಶಕ್ತಿ (ಎಚ್‌ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕಾ ಚಟುವಟಿಕೆಗಳನ್ನು 2026ರ ಜೂನ್ 1ರಿಂದ ಜುಲೈ 31ರವರೆಗೆ (ಉಭಯ ದಿನಗಳು ಸೇರಿದಂತೆ) ಅಂದರೆ ಒಟ್ಟು 61 ದಿನಗಳ ಕಾಲ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿ 10 ಅಶ್ವಶಕ್ತಿವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ ನಾಡದೋಣಿಗಳು ಈ ಅವಧಿಯಲ್ಲಿ ಕರಾವಳಿ ಸಮುದ್ರದಲ್ಲಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದ್ದು, ಹವಾಮಾನದ ವೈಪರೀತ್ಯದ ಮುನ್ಸೂಚನೆ ನೀಡಿದಾಗ ಅವು ಕಡ್ಡಾಯವಾಗಿ ಮುನ್ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಜೂನ್ 1ರಿಂದಲೇ ಕರಾವಳಿಯಲ್ಲಿ ಮೀನುಗಾರಿಕಾ ನಿಷೇಧ ಜಾರಿಗೊಳ್ಳುವುದರಿಂದ ಕಡ್ಡಾಯವಾಗಿ ಎಲ್ಲ ದೋಣಿಗಳು ಮೇ 31ರ ಒಳಗೆ ಬಂದರು ಪ್ರವೇಶ ಮಾಡಬೇಕು. ನಂತರ ಬಂದರು ಪ್ರವೇಶ ಮಾಡಿದ ದೋಣಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.





















































 
 

ಮೀನುಗಾರಿಕೆ ನಿಷೇಧಿಸಿದ ಸರ್ಕಾರಿ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ 1986ರಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆ ಯಾಗುವುದಲ್ಲದೇ, ಒಂದು ವರ್ಷದ ಅವಧಿಗೆ ರಾಜ್ಯ ಮಾರಾಟ ಕರ ರಹಿತ ಡೀಸಿಲ್ ಪಡೆಯಲು ಅನರ್ಹರಾಗುತ್ತಾರೆ.

ಈ ಆದೇಶವನ್ನು ಜಿಲ್ಲೆಯ ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರು ತಪ್ಪದೆ ಪಾಲಿಸಿ, ಸರಕಾರದೊಂದಿಗೆ ಸಹಕರಿಸುವಂತೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top