ಬಾತ್‌ರೂಂಗೆ ಹೋದಾಗ ಒಡವೆ ಸಮೇತ ಪರಾರಿಯಾಗಿದ್ದ ಪ್ರಿಯಕರನೂ ಅರೆಸ್ಟ್
ಅಹಮದಾಬಾದ್: ಪ್ರಿಯಕರನ ಜೊತೆ ಓಡಿಹೋಗಲು ತಾನು ಕೆಲಸ ಮಾಡುತ್ತಿದ್ದ ಚಿನ್ನದ ಶೋರೂಂನಲ್ಲೇ ಯುವತಿಯೊಬ್ಬಳು ಬರೋಬ್ಬರಿ 1.66 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಘಟನೆ ಅಹಮದಾಬಾದ್‌ನ ನಿಕೋಲ್ ಪ್ರದೇಶದಲ್ಲಿ ನಡೆದಿದೆ. ಮೇ 11ರಂದು ನಡೆದಿದ್ದ ಈ ಹೈಡ್ರಾಮಾ ಕಳ್ಳತನ ಪ್ರಕರಣದ ಆರೋಪಿ ಕರಾವಳಿ ಮೂಲದ ಹರ್ಷಿದಾ ಶೆಟ್ಟಿ ಹಾಗೂ ಆಕೆಯ ಪ್ರಿಯಕರನನ್ನು ಅಹಮದಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಯುವತಿಯ ಕರಾಮತ್ತು

ನಿಕೋಲ್ ಪ್ರದೇಶದ ಗ್ರಾವಿಟಿ ಶಾಪಿಂಗ್ ಮಾಲ್‌ನಲ್ಲಿ ದರ್ಶನ್‌ಭಾಯಿ ಎಂಬುವವರು ‘ದರ್ಶನ್‌ಭಾಯಿ ಜ್ಯುವೆಲ್ಲರಿ’ ಹೆಸರಿನ ಚಿನ್ನ ಮತ್ತು ಬೆಳ್ಳಿಯ ಶೋರೂಂ ನಡೆಸುತ್ತಿದ್ದಾರೆ. ಇಲ್ಲಿ ಮ್ಯಾನೇಜರ್, ಸೇಲ್ಸ್‌ಮನ್ ಸೇರಿದಂತೆ ಒಟ್ಟು 19 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಕಳೆದ 11 ತಿಂಗಳಿನಿಂದ ಹರ್ಷಿದಾ ಶೆಟ್ಟಿ ಎಂಬ ಯುವತಿ ಇಲ್ಲಿ ಸೇಲ್ಸ್‌ಗರ್ಲ್ ಆಗಿ ಕೆಲಸಕ್ಕೆ ಸೇರಿದ್ದಳು. ಮಾಲೀಕರ ನಂಬಿಕೆ ಗಳಿಸಿದ್ದ ಈಕೆಯನ್ನು ಉದ್ಯಮದ ಕೆಲಸಗಳಿಗಾಗಿ ಹೊರಗೆ ಸಹ ಕಳುಹಿಸಲಾಗುತ್ತಿತ್ತು.
ಆದರೆ ಮೇ 11ರ ಸಂಜೆ 5 ಗಂಟೆ ಸುಮಾರಿಗೆ ಗ್ರಾಹಕರೊಬ್ಬರು ಬಂದಾಗ, ಟ್ರೇಯಲ್ಲಿದ್ದ ಒಂದು ಚಿನ್ನದ ಲಾಕೆಟ್ ನಾಪತ್ತೆಯಾಗಿರುವುದನ್ನು ಸಿಬ್ಬಂದಿ ಕಂಜಿಭಾಯಿ ಗಮನಿಸಿದ್ದಾರೆ. ಈ ವೇಳೆ ಶೋರೂಂನಲ್ಲಿ ಹರ್ಷಿದಾ ಇರಲಿಲ್ಲ. ವಿಚಾರಿಸಿದಾಗ ತುರ್ತು ಕೆಲಸದ ನಿಮಿತ್ತ 4.30ಕ್ಕೆ ರಜೆ ಪಡೆದು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಮಾಲೀಕ ದರ್ಶನ್‌ಭಾಯಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹರ್ಷಿದಾಳ ಮುಖವಾಡ ಕಳಚಿ ಬಿದ್ದಿದೆ.
ಸಂಜೆ 4 ರಿಂದ 4.30ರ ಅವಧಿಯಲ್ಲಿ ಹರ್ಷಿದಾ ಹಿಂಭಾಗದ ಕಪಾಟಿನಿಂದ ಚಿನ್ನದ ಒಡವೆಗಳನ್ನು ತೆಗೆದು ತನ್ನ ಜೇಬಿಗೆ ಹಾಕಿಕೊಳ್ಳುತ್ತಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಬಳಿಕ ಎರಡನೇ ಮಹಡಿಯ ಸ್ಟೋರ್ ರೂಂಗೆ ಹೋಗಿ ತನ್ನ ಬ್ಯಾಗ್ ತಗೆದುಕೊಂಡು ಆಕೆ ಪರಾರಿಯಾಗಿದ್ದಾಳೆ. ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಪೂರ್ಣ ತಪಾಸಣೆ ನಡೆಸಿದಾಗ ಶೋರೂಂನಿಂದ ಒಟ್ಟು 1.66 ಕೋಟಿ ರೂ. ಮೌಲ್ಯದ ಚಿನ್ನದ ಸರಗಳು, ಲಾಕೆಟ್‌ಗಳು, ವಾಚ್‌ಗಳು, ಕಿವಿಯೋಲೆಗಳು, ಮಂಗಲಸೂತ್ರಗಳು ಮತ್ತು ಉಂಗುರಗಳು ನಾಪತ್ತೆಯಾಗಿರುವುದು ದೃಢಪಟ್ಟಿದೆ. ಈ ಸಂಬಂಧ ನಿಕೋಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಿಯಕರನಿಂದ ವಂಚನೆ

ಕದ್ದ ಒಡವೆಗಳನ್ನು ಮಾರಾಟ ಮಾಡಲು ಹರ್ಷಿದಾ ಮಾನೆಕ್ ಚೌಕ್‌ಗೆ ಬಂದಿರುವ ಬಗ್ಗೆ ಅಹಮದಾಬಾದ್ ಕ್ರೈಂ ಬ್ರಾಂಚ್‌ಗೆ ಖಚಿತ ಮಾಹಿತಿ ಸಿಕ್ಕಿದೆ. ತಕ್ಷಣ ದಾಳಿ ನಡೆಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಆಕೆಯ ಬಳಿ ಕೇವಲ 18 ಲಕ್ಷ ರೂ. ಮೌಲ್ಯದ ಒಡವೆಗಳು ಮಾತ್ರ ಪತ್ತೆಯಾಗಿದ್ದವು. 1.66 ಕೋಟಿ ರೂ. ಒಡವೆ ಎಲ್ಲಿ ಎಂದು ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ರೋಚಕ ಸತ್ಯ ಹೊರಬಿದ್ದಿದೆ.
ವಿಚಾರಣೆ ವೇಳೆ ಹರ್ಷಿದಾ, ತನಗೆ ಈ ಹಿಂದೆ ಮದುವೆಯಾಗಿ ವಿಚ್ಛೇದನವಾಗಿತ್ತು ಎಂದು ತಿಳಿಸಿದ್ದಾಳೆ. 6 ತಿಂಗಳ ಹಿಂದೆ ಆಕೆಗೆ ವಿವಾಹವಾಗಿ ಮಕ್ಕಳಿರುವ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಕಳೆದ 4 ತಿಂಗಳುಗಳಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಒಟ್ಟಿಗೆ ಬದುಕಿ ಹೊಸ ಸಂಸಾರ ಹೂಡುವ ಆಸೆ ತೋರಿಸಿದ ಪ್ರಿಯಕರನ ಮಾತು ನಂಬಿ ಹರ್ಷಿದಾ ಶೋ ರೂಂನಲ್ಲಿ ಕಳ್ಳತನ ಮಾಡಿದ್ದಾಳೆ. ಕಳ್ಳತನದ ನಂತರ ಇಬ್ಬರೂ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಓಡಿಹೋಗಿ ತಲೆಮರೆಸಿಕೊಂಡಿದ್ದರು.
ಆದರೆ ಜೊತೆಗಿದ್ದ ಪ್ರಿಯಕರ ಆಕೆಗೆ ಮಹಾವಂಚನೆ ಮಾಡಿದ್ದಾನೆ. ಒಂದು ದಿನ ಹರ್ಷಿದಾ ಸ್ನಾನ ಮಾಡಲು ಬಾತ್‌ರೂಂಗೆ ಹೋದಾಗ, ಈಕೆಯ ಪ್ರಿಯಕರ ಕೇವಲ 18 ಲಕ್ಷದ ಒಡವೆಗಳನ್ನು ಬಿಟ್ಟು, ಬಾಕಿ ಉಳಿದ ಕೋಟ್ಯಂತರ ಮೌಲ್ಯದ ಬಹುಪಾಲು ಚಿನ್ನದೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸ್ನಾನ ಮುಗಿಸಿ ಬಂದು ನೋಡಿದ ಹರ್ಷಿದಾಗೆ ಶಾಕ್ ಆಗಿದೆ. ಪ್ರಿಯಕರನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತ ಸಿಕ್ಕಿರಲಿಲ್ಲ. ಕೊನೆಗೆ ವಿಧಿಯಿಲ್ಲದೆ ಸಿಕ್ಕಷ್ಟು ಒಡವೆ ಮಾರಲು ಮಾನೆಕ್ ಚೌಕ್‌ಗೆ ಬಂದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಪೊಲೀಸರು ಹರ್ಷಿದಾ ನೀಡಿದ ಸುಳಿವಿನ ಆಧಾರದ ಮೇಲೆ ಆಕೆಯ ಪ್ರಿಯಕರನನ್ನೂ ಬಂಧಿಸಿದ್ದು, ಇಬ್ಬರಿಂದಲೂ ಕಳವಾಗಿದ್ದ ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
























