ಎಂಟು ವರ್ಷ ಆಳ್ವಿಕೆ ಮಾಡಿದ ಮುಖ್ಯಮಂತ್ರಿ ಎಂಬ ದಾಖಲೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೇ 20ಕ್ಕೆ 3 ವರ್ಷ ಪೂರ್ಣಗೊಳ್ಳಲಿದೆ. ಅದಕ್ಕೂ 4 ದಿನ ಮೊದಲೇ ಸಿದ್ದರಾಮಯ್ಯ ಅವರ ಹಲವು ದಾಖಲೆಗಳ ಸಾಲಿನಲ್ಲಿ ಮತ್ತೊಂದು ಸಾಧನೆ ಸೇರಿಕೊಂಡಿದೆ. ರಾಜ್ಯದ ಮುಖ್ಯಮಂತ್ರಿಯಾಗಿ 8 ವರ್ಷ ಪೂರ್ಣಗೊಳಿಸಿದ ಏಕೈಕ ಸಿಎಂ ಆಗಿ ಅವರು ಹೊರಹೊಮ್ಮಿದ್ದಾರೆ.
ಮೈಸೂರು ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸುವ ಮೂಲಕ 1977ರಲ್ಲಿ ಸಾರ್ವಜನಿಕ ಸೇವೆಗೆ ಪಾದಾರ್ಪಣೆ ಮಾಡಿದ್ದ ಸಿದ್ದರಾಮಯ್ಯ ತಮ್ಮ ರಾಜಕೀಯ ಬದುಕಿನ 50ನೇ ವರ್ಷಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಕಾಲಿರಿಸಲಿದ್ದಾರೆ. ಇದೇ ವೇಳೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ 8 ವರ್ಷಗಳನ್ನು ಪೂರೈಸಿದ್ದಾರೆ. ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿರುವುದು ಸಿದ್ದರಾಮಯ್ಯ ಅವರ ಸಾಧನೆಗಳ ಪಟ್ಟಿಯಲ್ಲೇ ಅಗ್ರಸ್ಥಾನ ಪಡೆದಿದೆ.
























