ಎರಡು ದಿನಗಳ ಅಂತರದಲ್ಲಿ ಎರಡನೇ ಏರಿಕೆ
ನವದೆಹಲಿ : ಆಟೋ, ಟ್ಯಾಕ್ಸಿ ಚಾಲಕರಿಗೆ ಕೇಂದ್ರ ಸರ್ಕಾರ ಮತ್ತೆ ಸಿಎನ್ಜಿ ದರ ಏರಿಕೆ ಶಾಕ್ ನೀಡಿದ್ದು, ಬೆಲೆ ಮತ್ತೆ 1 ರೂಪಾಯಿ ಏರಿಕೆಯಾಗಿದೆ. 2 ದಿನಗಳ ಹಿಂದಷ್ಟೇ ಕೆಜಿ ಸಿಎನ್ಜಿ ದರ 2 ರೂಪಾಯಿ ಏರಿಕೆ ಮಾಡಿತ್ತು. ಆ ಬೆನ್ನಲ್ಲೇ 48 ಗಂಟೆಗಳಲ್ಲಿ 2ನೇ ಬಾರಿಗೆ ಸಿಎನ್ಜಿ ದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಆ ಮೂಲಕ ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್ಜಿ ದರ 80.09 ರೂಪಾಯಿಗಳಿಗೆ ತಲುಪಿದೆ. ಈ ಹಿಂದೆ 2 ರೂ. ಏರಿಕೆಯ ಬಳಿಕ CNG ದರ 77.09 ರೂ.ಗಳಿಂದ 79.09ಕ್ಕೆ ಏರಿಕೆಯಾಗಿತ್ತು. ಹೀಗಾಗಿ ಎರಡು ದಿನಗಳ ಅಂತರದಲ್ಲಿ ಸಿಎನ್ಜಿ ದರ 3 ರೂ. ಏರಿಕೆಯಾದಂತಾಗಿದೆ.
ಸರ್ಕಾರಿ ತೈಲ ಕಂಪನಿಗಳ ಪ್ರಕಾರ, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯ ಅಸ್ಥಿರತೆಯಿಂದ ಉಂಟಾದ ಹೆಚ್ಚಿನ ಇನ್ಪುಟ್ ವೆಚ್ಚವನ್ನು ಸಮತೋಲನಗೊಳಿಸಲು ಸಿಎನ್ಜಿ ದರ ಏರಿಕೆ ಮಾಡಲಾಗಿದೆ. ಆದರೆ, ಜಾಗತಿಕ ಇಂಧನ ಬೆಲೆ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಈಗಿನ ದರ ಹೆಚ್ಚಳವು ಅಲ್ಪ ಭಾಗವನ್ನಷ್ಟೇ ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಸತತವಾಗಿ ಸಿಎನ್ಜಿ ದರ ಏರಿಕೆಯ ಪರಿಣಾಮ ಇದನ್ನೇ ನಂಬಿಕೊಂಡಿರುವ ಆಟೋ ಮತ್ತು ಬಹುತೇಕ ಕ್ಯಾಬ್ಗಳ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ನೈಸರ್ಗಿಕ ಅನಿಲದ ಬೆಲೆ ಹೆಚ್ಚಳದ ಸಂದರ್ಭದಲ್ಲಿಯೇ ಈ ಬಗ್ಗೆ ಚಾಲಕ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ದರ ಹೆಚ್ಚಳದ ಪರಿಣಾಮ ಬಾಡಿಗೆ ದರವನ್ನು ಏರಿಸಲೇಬೇಕಾದ ಅನಿವಾರ್ಯತೆ ಉದ್ಭವಿಸಿದೆ ಎಂದು ತಿಳಿಸಿದ್ದವು. ಬೆಂಗಳೂರಿನಲ್ಲಿಯೂ ಆಟೋ ಚಾಲಕ ಸಂಘಟನೆಗಳು ಮೀಟರ್ ದರ ಪರಿಷ್ಕೃತಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದವು.
























