ಕೇರಳದಲ್ಲಿ ಕಾನೂನು ರಚಿಸುವುದು ನಾವೇ : ಮುಸ್ಲಿಂ ಲೀಗ್‌ ಘೋಷಣೆ

ಮೆರವಣಿಗೆಯಲ್ಲಿ ಪ್ರಚೋದನಾಕಾರಿ ಘೋಷಣೆ, ಭಾರಿ ವಿವಾದ

ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಆಯ್ಕೆ ಮುಸ್ಲಿಂ ಲೀಗ್‌ ಮತ್ತು ಜಮಾತ್‌ ಎ ಇಸ್ಲಾಮ್‌ ಆದೇಶದ ಪ್ರಕಾರ ನಡೆದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಇದನ್ನು ಸಮರ್ಥಿಸುವ ಬೆಳವಣಿಗೆ ಕೇರಳದಲ್ಲಿ ನಡೆದಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ, ಅವರ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಆಯೋಜಿಸಿದ್ದ ವಿಜಯೋತ್ಸವದ ಮೆರವಣಿಗೆಯಲ್ಲಿ ಕೂಗಲಾದ ಪ್ರಚೋದನಾಕಾರಿ ಘೋಷಣೆಗಳು ಭಾರಿ ವಿವಾದಕ್ಕೆ ಕಾರಣವಾಗಿವೆ.

ಇಡುಕ್ಕಿ ಜಿಲ್ಲೆಯಲ್ಲಿ ನಡೆದ ಈ ಮೆರವಣಿಗೆಯಲ್ಲಿ, “ಮುಸ್ಲಿಂ ಲೀಗ್ ಆಳುವ ಕೇರಳದ ಮಣ್ಣಿನಲ್ಲಿ, ಲೀಗ್ ಮಾತ್ರ ಕಾನೂನುಗಳನ್ನು ನಿರ್ಧರಿಸುತ್ತದೆ” ಎಂಬ ಘೋಷಣೆಗಳ ಜೊತೆಗೆ ವಿವಿಧ ಸಮುದಾಯಗಳ ನಾಯಕರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ.





















































 
 

ಆರಂಭದಲ್ಲಿ ಸತೀಶನ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದ ಕಾರ್ಯಕರ್ತರು, ನಂತರ ನಾಯರ್ ಸರ್ವಿಸ್ ಸೊಸೈಟಿ (NSS) ಮುಖ್ಯಸ್ಥ ಸುಕುಮಾರನ್ ನಾಯರ್ ಮತ್ತು ಶ್ರೀ ನಾರಾಯಣ ಧರ್ಮ ಪರಿಪಾಲನಾ (SNDP) ಯೋಗದ ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಯಾರೀ ವೆಲ್ಲಪ್ಪಳ್ಳಿ? ಯಾರೀ ಸುಕುಮಾರನ್? ಹತ್ತಿರ ಬಂದು ನೋಡಿ, ಇದು ಲೀಗ್, ಇದು ಪಾಣಕ್ಕಾಡ್ ಲೀಗ್,” ಎಂದು ಕಾರ್ಯಕರ್ತರು ಕೂಗಿದರು. ಚುನಾವಣೆಗೂ ಮುನ್ನ ಲೀಗ್ ಪಕ್ಷವನ್ನು ಕಟುವಾಗಿ ಟೀಕಿಸಿದ್ದ ವೆಲ್ಲಪ್ಪಳ್ಳಿ ನಟೇಶನ್ ಅವರ ವಿರುದ್ಧ ಅಸಭ್ಯ ಪದಗಳನ್ನು ಬಳಸಲಾಗಿದೆ ಎನ್ನಲಾಗಿದೆ.

140 ಸದಸ್ಯರ ಕೇರಳ ವಿಧಾನಸಭೆಯಲ್ಲಿ 22 ಶಾಸಕರನ್ನು ಹೊಂದಿರುವ ಮುಸ್ಲಿಂ ಲೀಗ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಎರಡನೇ ಅತಿದೊಡ್ಡ ಪಕ್ಷವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರ ನಡುವೆ ಪೈಪೋಟಿ ಇದ್ದಾಗ, ಲೀಗ್ ಬಹಿರಂಗವಾಗಿಯೇ ಸತೀಶನ್ ಅವರನ್ನು ಬೆಂಬಲಿಸಿತ್ತು.

ಆದರೆ, ಎನ್.ಎಸ್.ಎಸ್ ಮತ್ತು ಎಸ್.ಎನ್.ಡಿ.ಪಿಗೆ ಸತೀಶನ್‌ ಬಗ್ಗೆ ವಿರೋಧವಿತ್ತು. ಈ ಹಿಂದೆ ಸತೀಶನ್ ಅವರು ಈ ಸಂಘಟನೆಗಳ ನಿಲುವನ್ನು ಹಲವು ಬಾರಿ ಬಹಿರಂಗವಾಗಿ ವಿರೋಧಿಸಿದ್ದರು. ಮೆರವಣಿಗೆಯಲ್ಲಿ ಕೇಳಿಬಂದ ಘೋಷಣೆಗಳು ಇದೇ ರಾಜಕೀಯ ಸಂಘರ್ಷದ ಪ್ರತಿಫಲನ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬೆಳವಣಿಗೆಯನ್ನು ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಮತ್ತು ಸಿಪಿಐ(ಎಂ), “ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಲೀಗ್‌ನ ಪ್ರಭಾವಕ್ಕೆ ಒಳಗಾಗಿದೆ ಮತ್ತು ಅದರ ಕಾರ್ಯಸೂಚಿಯನ್ನೇ ಅನುಸರಿಸುತ್ತಿದೆ” ಎಂದು ಆರೋಪಿಸಿವೆ.

ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮಾತನಾಡಿ, “ಸತೀಶನ್ ಅವರ ಆಯ್ಕೆಯ ಹಿಂದೆ ಮುಸ್ಲಿಂ ಲೀಗ್ ಮತ್ತು ಜಮಾತ್-ಎ-ಇಸ್ಲಾಮಿಯಂತಹ ಸಂಘಟನೆಗಳ ಒತ್ತಡವಿದೆ. ಮುಂದಿನ ಐದು ವರ್ಷಗಳ ಕಾಲ ಕೇರಳವನ್ನು ಪರೋಕ್ಷವಾಗಿ ಐಯುಎಂಎಲ್ ಆಳಲಿದೆ,” ಎಂದು ಟೀಕಿಸಿದ್ದಾರೆ. ಇದರ ಜೊತೆಗೆ, ಬಿಜೆಪಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಕಾಂಗ್ರೆಸ್ ಮತ್ತು ಲೀಗ್ ನಾಯಕತ್ವವನ್ನು ಅಣಕಿಸುವ ಮೀಮ್‌ಗಳನ್ನು ಹಂಚಿಕೊಂಡಿದೆ.

ವಿವಾದವು ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತುಕೊಂಡ ಮುಸ್ಲಿಂ ಯೂತ್ ಲೀಗ್, ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ತನ್ನ ಇಡುಕ್ಕಿ ಜಿಲ್ಲಾ ಸಮಿತಿಯನ್ನು ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.

error: Content is protected !!
Scroll to Top