ಹಿಂಬಾಕಿ ಪಾವತಿ, ವೇತನ ತಾರತಮ್ಯ ನಿವಾರಣೆ ಬೇಡಿಕೆ
ಬೆಂಗಳೂರು: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರ 26 ತಿಂಗಳ ಬಾಕಿ ಹಣ 1,272 ಕೋಟಿ ರೂ.ಒಂದೇ ಕಂತಿನಲ್ಲಿ ಪಾವತಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಜ್ಯೋತಿ ಅನಂತ ಸುಬ್ಬರಾವ್, ಫೆ. 18ರ ಸರಕಾರದ ಏಕಪಕ್ಷೀಯ ಆದೇಶವನ್ನು ಸೂಕ್ತವಾಗಿ ತಿದ್ದುಪಡಿ ಮಾಡಿ ದಿನಾಂಕ 2023ರ ಡಿ.31ರಂದು ಚಾಲ್ತಿಯಲ್ಲಿದ್ದ ಮೂಲ ವೇತನದ ಶೇ.25ರಷ್ಟು ಹೆಚ್ಚಿಸಿ 2024ರ ಜ.1ರಿಂದ ನಾಲ್ಕು ವರ್ಷಗಳ ಅವಧಿಗೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಚಾಲ್ತಿಯಲ್ಲಿರುವ ಕೈಗಾರಿಕಾ ಒಪ್ಪಂದಗಳ ಪ್ರಕಾರ 2022ರ ಜು.1ರಲ್ಲಿದ್ದ ಶೇ.31ರಷ್ಟು ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ ವಾರ್ಷಿಕ ಬಡ್ತಿಯನ್ನು2024ರ ಜ.25ರ ಬೇಡಿಕೆ ಪಟ್ಟಿಯಲ್ಲಿರುವಂತೆ ಹೆಚ್ಚಿಸಿ ವೇತನ ಶ್ರೇಣಿ ರಚಿಸಬೇಕು. ಈ ಅವಧಿಯ ಬಾಕಿ ಹಣವನ್ನು ಪಾವತಿಸಬೇಕು ಎಂದು ತಿಳಿಸಿದರು.
ಬಾಟಾ ಮತ್ತಿತರ ಭತ್ಯೆಗಳನ್ನು ಹೆಚ್ಚಿಸಬೇಕು, 2020ರ ಜ.1ರಿಂದ ಡಿ.31ರ ವರೆಗಿನ 12 ತಿಂಗಳ ಬಾಕಿ ಹಣವನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರಿಗೆ ಪಾವತಿಸಬೇಕು. 26 ತಿಂಗಳ ಬಾಕಿ ಹಣ 1272 ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ಆಗ್ರಹಿಸಿದರು.
ಫಾರಂ-4 ಮತ್ತಿತರ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿಯ ಜೊತೆ ಚರ್ಚಿಸಿ ಒಂದು ತಿಂಗಳ ಕಾಲಮಿತಿಯಲ್ಲಿ ಬಗೆಹರಿಸಬೇಕು ಎಂದು ಹೇಳಿದರು. ಸರ್ಕಾರಿ ನೌಕರರಿಗೆ 4 ವರ್ಷ ಮೊದಲೇ 7ನೇ ವೇತನ ಆಯೋಗ ನೇಮಿಸಿ ಶೇ.27.5ರಷ್ಟು ವೇತನ ಹೆಚ್ಚಿಸಿರುವ ಸರ್ಕಾರ ಸಾರಿಗೆ ನೌಕರರ ವಿಷಯದಲ್ಲಿ ತಾರತಮ್ಯದ ನಿಲುವು ತಾಳಿರುವುದು ಖಂಡನೀಯ. ಸರ್ಕಾರ ಈಗಲೂ ಹಠಮಾರಿ ಧೋರಣೆಯನ್ನು ಕೈಬಿಟ್ಟು ಎರಡೂ ಆದೇಶಗಳನ್ನು ಹಿಂಪಡೆದು, ಜಂಟಿ ಕ್ರಿಯಾ ಸಮಿತಿ ಜೊತೆ ಚರ್ಚಿಸಿ ಸಾರಿಗೆ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
























