ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ನಾಗಾಲೋಟ
ಮುಂಬೈ: ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಏರಿಕೆಯಾದ ಬೆನ್ನಲ್ಲೇ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಏರಿಕೆಯಾಗಿದೆ. ಇಂದು ಬೆಳಗ್ಗೆ 10 ಗ್ರಾಂ ಚಿನ್ನದ ಬೆಲೆ 8,838 ರೂ.(5.66%) ಏರಿಕೆಯಾಗಿ 1,61,887 ರೂ.ನಲ್ಲಿ ವ್ಯವಹಾರ ನಡೆಸುತ್ತಿದ್ದರೆ 1 ಕೆಜಿ ಬೆಳ್ಳಿ ದರ 18,0920 ರೂ. (6.36%) ಏರಿಕೆಯಾಗಿ 2,98,400 ರೂ. ನಲ್ಲಿ ವ್ಯವಹಾರ ನಡೆಸುತ್ತಿದೆ. ಮಧ್ಯಾಹ್ನ ನಂತರ ಈ ದರ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ.
ಎಂಸಿಎಕ್ಸ್ ಚಿನ್ನದ ವ್ಯವಹಾರ ಭೌತಿಕ ಚಿನ್ನದ ಬದಲಿಗೆ ಇಲೆಕ್ಟ್ರಾನಿಕ್ ರೂಪದಲ್ಲಿ ಚಿನ್ನದ ಬೆಲೆ ಏರಿಳಿತಗಳ ಮೇಲೆ ‘ಫ್ಯೂಚರ್ಸ್’ ಒಪ್ಪಂದಗಳ ಮೂಲಕ ವ್ಯಾಪಾರ ಮಾಡುವ ವೇದಿಕೆಯಾಗಿದೆ. ಇದು ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಳಿತದಿಂದ ಲಾಭ ಪಡೆಯಲು ಅಥವಾ ಹೆಡ್ಜಿಂಗ್ ಮಾಡಲು ಅನುವು ಮಾಡಿಕೊಡುತ್ತದೆ.
ಇಲ್ಲಿ ಚಿನ್ನವನ್ನು ಭೌತಿಕವಾಗಿ ಖರೀದಿಸದೆ ಭವಿಷ್ಯದ ದಿನಾಂಕದಂದು ನಿಗದಿತ ಬೆಲೆಯಲ್ಲಿ ಚಿನ್ನವನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಸುದ್ದಿಗಳ ಆಧಾರದ ಮೇಲೆ ಬೆಲೆಗಳು ಇಲ್ಲಿ ವೇಗವಾಗಿ ಬದಲಾಗುತ್ತಿರುತ್ತದೆ.
ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಫ್ಯೂಚರ್ಸ್ ದರಗಳು ಹೆಚ್ಚಾದಾಗ, ಸ್ಥಳೀಯ ಚಿನ್ನದ ಒಕ್ಕೂಟಗಳು ಮತ್ತು ಜ್ಯುವೆಲ್ಲರಿ ವ್ಯಾಪಾರಿಗಳು ಸಹ ಭೌತಿಕ ಚಿನ್ನದ ದರವನ್ನು ಹೆಚ್ಚಿಸುತ್ತಾರೆ. ಅದೇ ರೀತಿ ಎಂಸಿಎಕ್ಸ್‌ನಲ್ಲಿ ದರ ಇಳಿಕೆಯಾದರೆ ಅಂಗಡಿಗಳಲ್ಲೂ ಬೆಲೆ ತಗ್ಗುತ್ತದೆ.
ಎಂಸಿಎಕ್ಸ್ ದರ ಅಂತಾರಾಷ್ಟ್ರೀಯ ಚಿನ್ನದ ಬೆಲೆ ಮತ್ತು ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯದ ಆಧಾರದ ಮೇಲೆ ಬದಲಾಗುತ್ತದೆ. ಈ ಬದಲಾವಣೆಗಳು ತಕ್ಷಣವೇ ಸ್ಥಳೀಯ ಮಾರುಕಟ್ಟೆಗೆ ವರ್ಗಾವಣೆಯಾಗುತ್ತವೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ಭಾರತದ ಅತಿದೊಡ್ಡ ಸರಕು ಉತ್ಪನ್ನಗಳ ವಿನಿಮಯ ಕೇಂದ್ರವಾಗಿದೆ. ಇದು ಚಿನ್ನ, ಬೆಳ್ಳಿ, ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ಕೃಷಿ ಉತ್ಪನ್ನಗಳಂತಹ ವಸ್ತುಗಳನ್ನು ಡಿಜಿಟಲ್ ರೂಪದಲ್ಲಿ ಕೊಳ್ಳಲು ಮತ್ತು ಮಾರಾಟ ಮಾಡಲು ಅವಕಾಶ ನೀಡುವ ಮಾರುಕಟ್ಟೆ.
ಇದು ಷೇರು ಮಾರುಕಟ್ಟೆಯ ತರಹವೇ ಕಾರ್ಯನಿರ್ವಹಿಸುತ್ತದೆ, ಆದರೆ ಇಲ್ಲಿ ಷೇರುಗಳ ಬದಲಿಗೆ ಸರಕುಗಳ ಮೇಲೆ ವಹಿವಾಟು ನಡೆಯುತ್ತದೆ. ಇಲ್ಲಿ ಹೂಡಿಕೆದಾರರು ಭವಿಷ್ಯದ ದಿನಾಂಕದಂದು ಸರಕುಗಳನ್ನು ಕೊಳ್ಳಲು ಅಥವಾ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳುತ್ತಾರೆ. ಇದು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
























