ಬೆಳಗ್ಗೆ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಸಂಜೆ ತಿಂದಿದ್ದ ಮಕ್ಕಳು
ಛತ್ತೀಸ್‌ಗಢ : ಮುಂಬೈಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದ ಬಳಿಕ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ಘಟನೆ ನೆನಪಿನಿಂದ ಮರೆಯಾಗುವ ಮೊದಲೇ ಇದೇ ಮಾದರಿಯ ಘಟನೆಯೊಂದು ಛತ್ತೀಸ್‌ಗಢದ ಜಾಂಜಗೀರ್-ಚಂಪಾ ಎಂಬಲ್ಲಿ ಸಂಭವಿಸಿದೆ. ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ 15 ವರ್ಷದ ಬಾಲಕ ಮೃತಪಟ್ಟಿದ್ದು, ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈಯ ಘಟನೆಗೆ ಕಲ್ಲಂಗಡಿ ಹಣ್ಣಿನೊಳಗೆ ಸೇರಿಕೊಂಡಿದ್ದ ಇಲಿಪಾಷಾಣ ಸಾವಿಗೆ ಕಾರಣವಾಗಿದೆ ಎಂದು ವರದಿ ಬಂದಿತ್ತು.
ಛತ್ತೀಸ್‌ಗಢದ ಜಾಂಜಗೀರ್-ಚಂಪಾ ಜಿಲ್ಲೆಯ ಘುರ್ಕೋಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಪೋಡಿ ದಲ್ಹಾ ಗ್ರಾಮದ ಅಖಿಲೇಶ್ ಧಿವರ್ ಎಂದು ಗುರುತಿಸಲಾಗಿದೆ. ಈತ ತನ್ನ ಸೋದರ ಮಾವನ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಜೊತೆಗೆ ಪಿಂಟು (12), ಹಿತೇಶ್ (13) ಮತ್ತು ಮತ್ತೊಬ್ಬ 4 ವರ್ಷದ ಬಾಲಕ ಕೂಡ ಹಣ್ಣನ್ನು ಸೇವಿಸಿದ್ದರು.
ಸೋಮವಾರ ಬೆಳಗ್ಗೆ ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಮಕ್ಕಳು ಸಂಜೆ ಸೇವಿಸಿದ್ದರು ಎಂದು ತಿಳಿದುಬಂದಿದೆ. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ವಾಂತಿ, ಭೇದಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅಖಿಲೇಶ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ. ಉಳಿದ ಮೂವರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕತ್ತರಿಸಿದ ಹಣ್ಣನ್ನು ದೀರ್ಘಕಾಲ ತೆರೆದಿಟ್ಟಿದ್ದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ‘ಫುಡ್ ಪಾಯಿಸನಿಂಗ್’ ಆಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಮಕ್ಕಳು ಕಲ್ಲಂಗಡಿ ಹಣ್ಣಿನ ಜೊತೆಗೆ ಕೋಳಿ ಮಾಂಸವನ್ನೂ ಸೇವಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ. ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಬೇಸಿಗೆಯ ಸಮಯದಲ್ಲಿ ಕತ್ತರಿಸಿದ ಹಣ್ಣುಗಳನ್ನು, ವಿಶೇಷವಾಗಿ ರಸ್ತೆಬದಿಯಲ್ಲಿ ಅಥವಾ ದೀರ್ಘಕಾಲ ತೆರೆದಿಟ್ಟ ಹಣ್ಣುಗಳನ್ನು ತಿನ್ನುವುದು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
























