ಇಂದು ಚಳ್ಳಕೆರೆಯಲ್ಲಿ ಸಚಿವ ಡಿ.ಸುಧಾಕರ್‌ ಅಂತ್ಯಕ್ರಿಯೆ

ಶ್ವಾಸಕೋಶದ ಸೋಂಕಿನಿಂದ ಭಾನುವಾರ ನಿಧನ ಹೊಂದಿರುವ ಸಚಿವ

ಚಳ್ಳಕೆರೆ: ನಿನ್ನೆ ತೀರಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅಂತ್ಯಕ್ರಿಯೆ ಅವರ ಕುಟುಂಬದ ಇಚ್ಚೆಯಂತೆ ಜೈನ ಸಮುದಾಯದ ಸಂಪ್ರದಾಯದ ಪ್ರಕಾರ ಚಳ್ಳಕೆರೆಯ ಚಿತ್ರದುರ್ಗ ರಸ್ತೆಯ ಸಚಿವರ ಸೆಟಲ್‌ ಬ್ಯಾಡ್ಮಿಂಟನ್‌ ಕೋರ್ಟ್‌ ಆವರಣದಲ್ಲಿ ಸೋಮವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅನಾರೋಗ್ಯ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿತ್ರದುರ್ಗ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಕರ್ ಭಾನುವಾರ ಬೆಳಗ್ಗೆ 3:15ಕ್ಕೆ ಕೊನೆಯುಸಿರೆಳೆದಿದ್ದಾರೆ.





















































 
 

ಮೊಣಕಾಲು ಶಸ್ತ್ರಚಿಕಿತ್ಸೆ ಸಂಬಂಧ ಸಚಿವ ಸುಧಾಕರ್​​ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಳಿಕ ಅವರನ್ನು ಮಣಿಪಾಲ್‌ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಐಸಿಯುನಲ್ಲಿಯೇ ಇದ್ದ ಸುಧಾರಕರ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಯಿಂದ ಆಗಮಿಸಿದ ಪ್ರಾರ್ಥಿವ ಶರೀರವನ್ನು ನಗರದ ಬೆಂಗಳೂರು ರಸ್ತೆಯಲ್ಲಿರುವ ಸಚಿವ ನಿವಾಸಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಸಚಿವ ಡಿ.ಸುಧಾಕರ್‌ ಅವರ ಇಲ್ಲಿನ ನಿವಾಸದ ಬಳಿ ಶನಿವಾರ ಮತ್ತು ಭಾನುವಾರ ಎರಡು ದಿನ ಜನರ ದಂಡು ನೆರೆದಿರುತ್ತಿತ್ತು. ಆದರೆ, ಭಾನುವಾರ ಮುಂಜಾನೆಯೇ ಅವರ ಸಾವಿನ ಸುದ್ದಿ ಕೇಳಿ, ಮನೆ ಬಳಿ ನೀರವ ಮೌನ ಆವರಿಸಿತ್ತು.

ಹಿರಿಯೂರು ಹಾಗೂ ಚಳ್ಳಕೆರೆಯನ್ನು ತಮ್ಮ ಎರಡು ಕಣ್ಣುಗಳಂತೆ ಕಂಡಿದ್ದ ಸಚಿವ ಡಿ.ಸುಧಾಕರ್‌ ಇನ್ನು ನೆನಪು ಮಾತ್ರವಾಗಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ವಿಧಿವಶರಾದ ಸುದ್ದಿ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ತೀವ್ರ ದುಃಖ ಮಡುಗಟ್ಟುವಂತೆ ಮಾಡಿತ್ತು.

ಡಿ.ಸುಧಾಕರ್‌ ರಾಜಕೀಯ ಪ್ರವೇಶ ಮಾಡಿದ ದಿನಗಳಿಂದಲೇ ಕಾರ್ಯಕರ್ತರ ಸಭೆ, ಸಮಾರಂಭಗಳು ಹಾಗೂ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ವಿಶೇಷವಾಗಿ ಚಿತ್ರದುರ್ಗ ರಸ್ತೆಯಲ್ಲಿರುವ ಡಿ.ಸುಧಾಕರ್‌ ಸೆಟಲ್‌ ಕೋರ್ಟ್‌ ಆವರಣ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು. ಸಚಿವರ ನೆಚ್ಚಿನ ಸ್ಥಳವಾಗಿದ್ದ ಸೆಟಲ್‌ ಕೋರ್ಟ್‌ನಲ್ಲೇ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ಮುಂದಾಗಿದ್ದರಿಂದ ಭಾನುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಜಿಪಂ ಸಿಇಒ ಡಾ.ಎಸ್‌.ಆಕಾಶ್‌, ತಹಸೀಲ್ದಾರ್‌ ರೇಹಾನ್‌ ಪಾಷ, ತಾಪಂ ಇಒ ಶಶಿಧರ್‌, ನಗರಸಭೆ ಪೌರಾಯುಕ್ತೆ ನಾಗವೇಣಿ, ಡಿವೈಎಸ್‌ಪಿ ಸತ್ಯನಾರಾಯಣರಾವ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಸಚಿವರು, ಶಾಸಕರು, ಗಣ್ಯರು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಲ್ಲಿನ ಡಿ.ಸುಧಾಕರ್‌ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಚಳ್ಳಕೆರೆ ಸೋಮಗುದ್ದು ರಸ್ತೆಯ ಕ್ರೀಡಾಂಗಣದಲ್ಲಿ ಮೂರು ಕಡೆ ಮತ್ತು ಸಾಣೀಕೆರೆ ವೇದಾ ಕಾಲೇಜು ಬಳಿ ಎರಡು ಹೀಗೆ ಐದು ಹೆಲಿಪ್ಯಾಡ್‌ ಸಜ್ಜುಗೊಳಿಸಿದೆ.

ಅಂತಿಮ ದರ್ಶನಕ್ಕೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಸೇರುವ ಹಿನ್ನೆಲೆ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಶಿವಮೊಗ್ಗದಿಂದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಗತ್ಯ ಬಂದೋಬಸ್ತ್ ಗಾಗಿ ಕರೆಸಲಾಗಿದ್ದು, ವಿಐಪಿ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಮಾರ್ಗಗಳ ವ್ಯವಸ್ಥೆ ಕಲ್ಪಿಸಲು ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ.

error: Content is protected !!
Scroll to Top