ರಿಕ್ಷಾದಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 15 ಚೀಲ ಪಡಿತರ ಅಕ್ಕಿ ವಶ

ವಿಟ್ಲ: ಅಟೋರಿಕ್ಷಾವೊಂದರಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಅಕ್ಕಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ವಿಟ್ಲ ಕಸಬಾ ಗ್ರಾಮದ ನಿವಾಸಿ ಅಲಿ ಅಕ್ಬರ್ (40) ಬಂಧಿತ ಆರೋಪಿ.

ಬಂಟ್ವಾಳ ತಾಲೂಕಿನ ಆಹಾರ ನಿರೀಕ್ಷಕ ಎ. ಪ್ರಶಾಂತ ಶೆಟ್ಟಿ (47) ಅವರಿಗೆ ಮೇ 9ರಂದು ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರದಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಆಹಾರ ಇಲಾಖೆಯ ಸಿಬ್ಬಂದಿ ಹಾಗೂ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದ ವೇಳೆ ಮನೆಯೊಂದರ ಅಂಗಳದಲ್ಲಿ ಕೆಎ-70-ಎ-2034 ಸಂಖ್ಯೆಯ ಅಟೋರಿಕ್ಷಾದಲ್ಲಿ 15 ಚೀಲ ಪಡಿತರ ಅಕ್ಕಿಯನ್ನು ತುಂಬಿಸಿಟ್ಟಿರುವುದು ಪತ್ತೆಯಾಯಿತು.

ಈ ಕುರಿತು ಸ್ಥಳದಲ್ಲಿದ್ದ ವಿಟ್ಲ ಕಸಬಾ ಗ್ರಾಮದ ನಿವಾಸಿ ಅಲಿ ಅಕ್ಬರ್ (40) ಎಂಬಾತನಲ್ಲಿ ವಿಚಾರಣೆ ನಡೆಸಿದಾಗ, ಆತನೇ ಅಕ್ಕಿ ಚೀಲಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಶೀಲನೆ ವೇಳೆ 15 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 679.38 ಕೆಜಿ ತೂಕದ ಪಡಿತರ ಅಕ್ಕಿ ಪತ್ತೆಯಾಗಿದ್ದು, ಇದರ ಮೌಲ್ಯ 23,098 ರೂ.ಎಂದು ತಿಳಿದುಬಂದಿದೆ.





















































 
 

ಸ್ವಾಧೀನಪಡಿಸಿಕೊಂಡ ಅಕ್ಕಿ ಹಾಗೂ ಅಟೋರಿಕ್ಷಾವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 103/2026ರಡಿ ಅವಶ್ಯಕ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7 ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016ರ ಕಲಂ 18ರಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!
Scroll to Top