ಸರಳ ಬಹುಮತದ ಸ್ಥಾನಗಳನ್ನು ಒಗ್ಗೂಡಿಸುವಲ್ಲಿ ವಿಜಯ್ ವಿಫಲ
ಚೆನ್ನೈ: ತಮಿಳುನಾಡಿನಲ್ಲಿ ಬಹುಮತದ ಕಣ್ಣಾಮುಚ್ಚಾಲೆ ಮುಂದುವರಿದಿದ್ದು, ತಡರಾತ್ರಿ ಸಂಭವಿಸಿದ ಬೆಳವಣಿಗೆಯಿಂದಾಗಿ ವಿಜಯ್ ನೇತೃತ್ವದ ಟಿವಿಕೆ ಇಂದು ಅಧಿಕಾರ ಗ್ರಹಣ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಬಹುಮತದ ಕೊರತೆ ಎದುರಿಸುತ್ತಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಇಂದು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ನಿನ್ನೆ ಹೇಳಲಾಗಿತ್ತು. ಆದರೆ ಇಷ್ಟರ ತನಕ ರಾಜ್ಯಪಾಲರು ಅವರಿಗೆ ಆಹ್ವಾನ ನೀಡಿಲ್ಲ. ಈ ನಡುವೆ ನಿನ್ನೆ ರಾತ್ರಿಯಿಡೀ ತಮಿಳುನಾಡು ರಾಜಕೀಯದಲ್ಲಿ ನಾನಾ ರೀತಿಯ ಬೆಳವಣೆಗೆಗಳು ನಡೆದಿವೆ.
ದಳಪತಿ ವಿಜಯ್ ನಿನ್ನೆ ಸಂಜೆ ಮೂರನೇ ಬಾರಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು ಮತ್ತು ತಮಗೆ 118 ಶಾಸಕರ ಬೆಂಬಲವಿದೆ ಎಂದು ಹೇಳಿದ್ದರು. ಹೀಗಾಗಿ ವಿಜಯ್ ಇಂದು ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿತ್ತು.
ಆದರೆ ಲೋಕಭವನದ ಮೂಲಗಳು ತಿಳಿಸಿರುವ ಪ್ರಕಾರ, ನಟ-ರಾಜಕಾರಣಿ ವಿಜಯ್ ಅವರಿಗೆ ಸಂಖ್ಯಾಬಲ ಇಲ್ಲ. ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬೆಂಬಲ ಸಾಬೀತುಪಡಿಸಲು ವಿಫಲರಾದ ಕಾರಣ ಅವರಿಗೆ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಲಾಗಿಲ್ಲ.
ಟಿವಿಕೆಗೆ ಬೆಂಬಲ ನೀಡುವಂತೆ ವಿಸಿಕೆ, ಎಎಂಎಂಕೆ ಮತ್ತು ಐಯುಎಂಎಲ್ ಶಾಸಕರೊಂದಿಗೆ ಬಿರುಸಿನ ಮಾತುಕತೆ ನಡೆಸಿದರೂ, ವಿಜಯ್ ಅವರಿಗೆ ಅಗತ್ಯವಿರುವ ಬೆಂಬಲವನ್ನು ಪಡೆಯಲು ಸಾಧ್ಯವಾಗಲಿಲ್ಲ. ಸದ್ಯ ವಿಜಯ್ ಅವರು 116 ಶಾಸಕರ ಬೆಂಬಲ ಮಾತ್ರ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 23ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ, ಸರ್ಕಾರ ರಚಿಸಲು ಡಿಎಂಕೆ ಮಿತ್ರಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಅವರ ಬೆಂಬಲವನ್ನು ಕೋರಿತ್ತು.
ದಳಪತಿ ವಿಜಯ್ ನೇತೃತ್ವದ ಟಿವಿಕೆಗೆ ಈಗಾಗಲೇ ಕಾಂಗ್ರೆಸ್ ಷರತ್ತುಬದ್ಧ ಬೆಂಬಲ ನೀಡಿದೆ. ಇದೀಗ ಸಿಪಿಐ, ಸಿಪಿಎಂ ಬೆಂಬಲ ಘೋಷಿಸಿದ್ದು, ವಿಸಿಕೆ ಹಾಗೂ ಐಯುಎಂಎಲ್ ಇನ್ನೂ ಬೆಂಬಲ ಘೋಷಿಸಿಲ್ಲ. ಮುಸ್ಲಿಂ ಲೀಗ್ ಬೆಂಬಲ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಈ ನಡುವೆ ಏಕೈಕ ಶಾಸಕನನ್ನು ಹೊಂದಿರುವ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ತಾನಿನ್ನೂ ಅಧಿಕೃತವಾಗಿ ಬೆಂಬಲ ಘೋಷಿಸಿಲ್ಲ, ಆದರೆ ವಿಜಯ್ ತನ್ನ ಶಾಸಕನ ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂದು ದೂರು ನೀಡುವುದರೊಂದಿಗೆ ವಿಜಯ್ಗೆ ಹೊಸ ಸಂಕಷ್ಟ ತಂದಿಟ್ಟಿದೆ. ಟಿವಿಕೆ ವಿರುದ್ಧ ಎಎಂಎಂಕೆ ಫೋರ್ಜರಿ ಆರೋಪ ಪೊಲೀಸ್ ದೂರು ದಾಖಲಿಸಿದೆ.
























