ಈ ತಿಂಗಳಿಂದ 2 ಕೆಜಿ ರಾಗಿ ಅಥವಾ ಜೋಳ ವಿತರಣೆ
ಬೆಂಗಳೂರು: ಬಿಪಿಎಲ್ ಪಡಿತರ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಅಕ್ಕಿ ಜತೆಗೆ ರಾಗಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಸದ್ಯ ಪ್ರತಿ ವ್ಯಕ್ತಿಗೆ ರಾಜ್ಯ ಹಾಗೂ ಕೇಂದ್ರದ್ದು ಸೇರಿ ಒಟ್ಟು 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಈ ತಿಂಗಳಿಂದ 2 ಕೆ.ಜಿ. ರಾಗಿ ನೀಡಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನಿರ್ಧರಿಸಿದೆ.
ರಾಜ್ಯದಲ್ಲಿ ಈಗ 1.14 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ಗಳಿದ್ದು, 4.01 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ. ಅವರಿಗೆ ಪ್ರತಿ ತಿಂಗಳು 57 ಸಾವಿರ ಮೆಟ್ರಿಕ್ ಟನ್ ರಾಗಿ ಅಗತ್ಯವಿದ್ದು, 10 ತಿಂಗಳಿಗೆ ನೀಡಲು ಅಗತ್ಯವಿರುವಷ್ಟು ಸಂಗ್ರಹಿಸಲಾಗಿದೆ. ಇದರ ಜತೆಗೆ ಉಳಿದ ಸುಮಾರು 20-30 ಸಾವಿರ ಮೆಟ್ರಿಕ್ ಟನ್ನಷ್ಟು ರಾಗಿಯನ್ನು ಅನ್ಯ ರಾಜ್ಯಗಳಿಗೆ ನೀಡಲು ನಿಗಮ ನಿರ್ಧರಿಸಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮವು 5.2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಬೆಂಬಲ ಬೆಲೆಯಡಿ ರೈತರಿಂದ ಖರೀದಿಸಿ ದಾಸ್ತಾನು ಮಾಡಿದೆ.
ರಾಗಿ ಮಾರಾಟ ಮಾಡಲು ಮೇ 15ರವರೆಗೆ ನೋಂದಾಯಿತ ರೈತರಿಗೆ ಅವಕಾಶ ನೀಡಲಾಗಿದೆ. 6 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ರಾಗಿ ಸಂಗ್ರಹ ಗುರಿ ಹೊಂದಿದ್ದು, ಮೇ ತಿಂಗಳವರೆಗೆ ಖರೀದಿ ನಡೆಯುತ್ತದೆ. ಹತ್ತು ತಿಂಗಳಿಗೆ ವಿತರಣೆ ಮಾಡುವಷ್ಟು ರಾಗಿ-ಜೋಳ ಖರೀದಿಸಿ ಸಂಗ್ರಹಿಸಿಡಲಾಗುವುದು. ಈ ಸಂಬಂಧ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದು ವಿತರಿಸಲು ಉದ್ದೇಶಿಸಲಾಗಿದೆ.
ರಾಜ್ಯದಲ್ಲಿ ಸುಮಾರು 8-10 ಜಿಲ್ಲೆಗಳನ್ನು ಹೊರತುಪಡಿಸಿದರೆ ಮಾಸಿಕ 57 ಸಾವಿರ ಮೆಟ್ರಿಕ್ ಟನ್ ರಾಗಿ ಬೇಕಾಗುತ್ತದೆ. 8-9 ಸಾವಿರ ಮೆಟ್ರಿಕ್ ಟನ್ ಜೋಳ ಬೇಕಾಗುತ್ತದೆ ಎಂದು ಇಲಾಖೆ ಅಂದಾಜಿಸಿದೆ. ಹಳೇ ಮೈಸೂರು ಭಾಗದವರಿಗೆ 2 ಕೆಜಿ ರಾಗಿ ಹಾಗೂ ಹೈದರಾಬಾದ್ ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಭಾಗದ ಪಡಿತರದಾರರಿಗೆ 2 ಕೆಜಿ ಜೋಳ ನೀಡಲು ನಿಗಮ ನಿರ್ಧರಿಸಿದೆ.
























