ರೈಲಿನಲ್ಲಿ ಸೀಟು ಜಗಳ : ರೈಲ್ವೆ ಸಿಬ್ಬಂದಿ ಸಹಿತ ಇಬ್ಬರಿಗೆ ಚಾಕು ಇರಿತದಿಂದ ಗಂಭೀರ ಗಾಯ

ಸೀಟಿಗಾಗಿ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಪ್ರಯಾಣಿಕನಿಗೆ ಇರಿದ ದುಷ್ಕರ್ಮಿಗಳು

ಬೆಂಗಳೂರು : ರೈಲಿನಲ್ಲಿ ಸೀಟಿನ ವಿಚಾರದಲ್ಲಿ ಜಗಳವಾಗಿ ಚಾಕುವಿನಿಂದ ಇರಿದಿದ್ದು, ಓರ್ವ ಪ್ರಯಾಣಿಕ ಹಾಗೂ ರೈಲ್ವೆ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ರೈಲ್ವೆ ನಿಲ್ದಾಣದ ಸ್ವಲ್ಪ ದೂರದಲ್ಲಿ ಬುಧವಾರ ನಡೆದಿದೆ. ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಮೂವರು ಪ್ರಯಾಣಿಕರನ್ನು ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಾಕು ಇರಿತಕ್ಕೆ ಒಳಗಾಗಿರುವ ತುಮಕೂರು ಮೂಲದ ಶಿವಕುಮಾ‌ರ್ ಹಾಗೂ ರೈಲ್ವೆ ಸಿಬ್ಬಂದಿ ಕುಮಾರ್ ಅವರಿಗೆ ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ, ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಮಿಮ್ಸ್ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕುವಿನ ಇರಿದು ಪರಾರಿಯಾಗಲು ಯತ್ನಿಸಿದ ಸುಬಾನ್‌ ಖುರೇಷಿ, ಶೋಯಬ್ ಹಾಗೂ ವಾಸಿಂ ಅವರನ್ನು ರೈಲ್ವೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





















































 
 

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಸೀಟಿಗಾಗಿ ಜಗಳ ನಡೆಯುತ್ತಿದ್ದ ಸಂದರ್ಭ ಪ್ರಶ್ನಿಸಲು ಹೋದ ತುಮಕೂರು ಮೂಲದ ಶಿವಕುಮಾ‌ರ್ ಅವರಿಗೆ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ತಕ್ಷಣ ಪ್ರಾಣ ರಕ್ಷಣೆಗಾಗಿ ಶಿವಕುಮಾರ್ ಮದ್ದೂರು ರೈಲ್ವೆ ಸ್ಟೇಷನ್‌ಗೆ ಹತ್ತಿರ ಇರುವ ಚನ್ನೇಗೌಡನದೊಡ್ಡಿ ಬಳಿ ರೈಲಿನ ಚೈನ್‌ ಎಳೆದಿದ್ದಾರೆ. ರೈಲು ನಿಲ್ಲುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಹಿಡಿಯಲು ಹೋದ ಚನ್ನೆಗೌಡನದೊಡ್ಡಿ ಬಳಿ ಇರುವ ರೈಲ್ವೆ ಗೇಟ್ ಕೀಪರ್ ಕುಮಾರ್‌ಗೂ ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಬೆನ್ನಟ್ಟಿದ ಇತರ ಪ್ರಯಾಣಿಕರು ಹಾಗೂ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರಿಂದ ಗೂಸಾ ತಿಂದ ಆರೋಪಿಗಳೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top