ತಮಿಳುನಾಡಲ್ಲಿ ಡಿಎಂಕೆ-ಎಐಡಿಎಂಕೆ ಮೈತ್ರಿ?

ಬದ್ಧವೈರಿಗಳೇ ಸೇರಿಕೊಂಡು ಸರ್ಕಾರ ರಚಿಸುವ ಕುರಿತು ಮಾತುಕತೆ

ಚೆನ್ನೈ: ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಸಿಗದಿರುವ ಕಾರಣ ತಮಿಳುನಾಡಿನ ರಾಜಕಾರಣ ಅತಂತ್ರ ಸ್ಥಿತಿಯಲ್ಲಿದೆ. 108 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್‌ ನೇತೃತ್ವ ಟಿವಿಕೆ ಸರ್ಕಾರ ರಚಿಸುವ ಇರಾದೆಯಲ್ಲಿದ್ದರೂ ಸರಳ ಬಹುಮತಕ್ಕೆ ಅಗತ್ಯವಿರುವ 10 ಸ್ಥಾನಗಳನ್ನು ಎಲ್ಲಿಂದ ಭರ್ತಿ ಮಾಡಿಕೊಳ್ಳುವುದು ಎಂದು ತಿಳಿಯದೆ ಗೊಂದಲದಲ್ಲಿದೆ. ಕಾಂಗ್ರೆಸ್‌ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದರೂ ಕಾಂಗ್ರೆಸ್‌ ಬಳಿ ಇರುವುದು ಐದು ಸ್ಥಾನಗಳು ಮಾತ್ರ.

ಹೀಗಾಗಿ ತಮಿಳುನಾಡಿನ ರಾಜಕೀಯದಲ್ಲಿ ಕ್ಷಣಕ್ಕೊಂದು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಟಿವಿಕೆ ಮುಖ್ಯಸ್ಥ ವಿಜಯ್‌ ಬಹುಮತ ಸಾಬೀತುಪಡಿಸಲು ವಿಫಲರಾದರೆ ಬದ್ಧ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು ಎಂಬ ಸುದ್ದಿಯೊಂದು ನಿನ್ನೆಯಿಂದ ಭಾರಿ ವೈರಲ್‌ ಆಗುತ್ತಿದೆ. ಇದಕ್ಕೆ ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬ ಹಳೇ ನಾಣ್ಣುಡಿಯನ್ನು ಸಮರ್ಥನೆಯಾಗಿ ಬಳಸಿಕೊಳ್ಳಲಾಗಿದೆ.





















































 
 

ಮೈತ್ರಿ ಸಾಧಿಸುವ ವಿಚಾರದಲ್ಲಿ ಎಐಎಡಿಎಂಕೆ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಗೆ ಶಾಕ್‌ ನೀಡಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಜಯಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್‌ 5, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ಸಿಪಿಐ (ಎಂ) 2, ಮತ್ತು ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನವನ್ನು ಗೆದ್ದಿವೆ. ಇವೆಲ್ಲ ಸೇರಿದರೆ ಸರ್ಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತಕ್ಕಿಂತ ಹೆಚ್ಚೇ ಸ್ಥಾನಗಳಾಗುತ್ತವೆ. ಒಂದು ವೇಳೆ ಈ ಮೈತ್ರಿಯನ್ನು ವಿರೋಧಿಸಿ ಡಿಎಂಕೆ ಸಖ್ಯವನ್ನು ಕಾಂಗ್ರೆಸ್‌ ಕಡಿದುಕೊಂಡರೂ ಸಮಸ್ಯೆಯಾಗುವುದಿಲ್ಲ.

ಟಿವಿಕೆ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ವಿಜಯ್‌ ನಿನ್ನೆ ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ ಮೌಖಿಕ ಮನವೊಲಿಕೆಯಲ್ಲಿ ವಿಫಲರಾದರು. ಇದರಿಂದ ಸರ್ಕಾರ ರಚನೆ ಹಕ್ಕು ಮಂಡನೆಗೆ ಅವಕಾಶ ಸಿಕ್ಕಿಲ್ಲ.

118 ಸ್ಥಾನಗಳ ಬಹುಮತವನ್ನು ಸಾಧಿಸಲು ಟಿವಿಕೆಗೆ ಕನಿಷ್ಠ 10 ಸ್ಥಾನಗಳು ಬೇಕಾಗಿವೆ. ಕಾಂಗ್ರೆಸ್‌ನ ಐದು ಸ್ಥಾನಗಳೊಂದಿಗೆ, ವಿಜಯ್ ಗೆದ್ದ ಎರಡು ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ, ಈ ಸಂಖ್ಯೆ 112ಕ್ಕೆ ಏರಿದೆ. ಆದರೆ, ಬಹುಮತ ಸಾಬೀತಿಗೆ ಟಿವಿಕೆಗೆ ಆರು ಸ್ಥಾನಗಳ ಅಗತ್ಯವಿದೆ. ಅತಂತ್ರ ಜನಾದೇಶವನ್ನೇ ದಾಳವಾಗಿ ಬಳಸಿಕೊಂಡಿರುವ ಎಐಎಡಿಎಂಕೆ, ಟಿವಿಕೆಗೆ ಬೆಂಬಲ ನೀಡಲ್ಲ ಎಂದು ಸ್ಪಷ್ಟಪಡಿಸಿದೆ. ಇತ್ತ ಡಿಎಂಕೆ ಜೊತೆಗೆ ಮೈತ್ರಿ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.

error: Content is protected !!
Scroll to Top