ಕಚೇರಿಯಲ್ಲಿ ರಾಸಲೀಲೆಯಾಡಿದ ವಿಡಿಯೋ ವೈರಲ್ ಆದ ಬಳಿಕ ಅಮಾನತುಗೊಂಡಿದ್ದ ಉನ್ನತ ಅಧಿಕಾರಿ
ಬೆಂಗಳೂರು: ಮಹಿಳೆಯರೊಂದಿಗೆ ಕಚೇರಿಯಲ್ಲೇ ರಾಸಲೀಲೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಮಾನತಿನಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಮರು ನೇಮಕ ಮಾಡಲಾಗಿದೆ.
ಅವರಿಗಾಗಿಯೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿದೆ. ಆಲ್ ಇಂಡಿಯಾ ಸರ್ವಿಸ್ ನಿಯಮಗಳ ಅಡಿ ಈಗ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಕಚೇರಿಯಲ್ಲಿ ಮಹಿಳೆಯರೊಂದಿಗೆ ಕೆ.ರಾಮಚಂದ್ರ ರಾವ್ ಅನುಚಿತವಾಗಿ ವರ್ತಿಸಿದ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿತ್ತು. ದೃಶ್ಯಗಳು ಎಡಿಟ್ ಆಗಿಲ್ಲ. ಅವು ಡೀಪ್ಫೇಕ್ ಮತ್ತು AI ನಿರ್ಮಿತ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೂ ಅಮಾನತು ಹಿಂಪಡೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಡಾ.ಕೆ.ರಾಮಚಂದ್ರ ರಾವ್ ಅವರು ಪೊಲೀಸ್ ಸಮವಸ್ತ್ರ ಧರಿಸಿ, ತಮ್ಮ ಕಚೇರಿಯಲ್ಲೇ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸರ್ಕಾರಿ ಕಚೇರಿಯಲ್ಲಿ, ಉನ್ನತ ದರ್ಜೆಯ ಅಧಿಕಾರಿಯೊಬ್ಬರು ಇಂತಹ ಕೃತ್ಯವೆಸಗಿರುವುದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿ ಇಲಾಖೆಗೆ ಮುಜುಗರವನ್ನುಂಟು ಮಾಡಿತ್ತು. ಇದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಕಳೆದ ಜನವರಿ 19ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿತ್ತು. ಬಳಿಕ ರಾಮಚಂದ್ರ ರಾವ್ ಅವರ ವಿರುದ್ಧ ಇಲಾಖಾ ತನಿಖೆಯನ್ನ ಪ್ರಾರಂಭಿಸಲಾಗಿತ್ತು.
ಕಳೆದ ಏಪ್ರಿಲ್ 27ರಂದು ರಾಮಚಂದ್ರರಾವ್ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಇದೇ ವೇಳೆ ಅಶ್ಲೀಲ ವಿಡಿಯೋ ಕೇಸ್ನಲ್ಲಿ ಸಿಲುಕಿರುವ ರಾಮಚಂದ್ರ ರಾವ್ ಅವರು ವಿಡಿಯೋ ವೈರಲ್ ಆದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದರು. ನನ್ನ ಸಸ್ಪೆನ್ಶನ್ ಬಗ್ಗೆ ಮಾತಾಡಿದ್ದೇನೆ. ತನಿಖೆ ನಡೆಯುತ್ತಿದೆ ಅದರ ಬಗ್ಗೆ ಮಾತಾಡಲ್ಲ, ನನ್ನ ಮೇಲೆ ಯಾವುದೂ ಕೇಸ್ ಇಲ್ಲ, ಈಗಲೇ ಸಾಕಷ್ಟು ಸಫರ್ ಆಗಿದ್ದೇನೆ ಬೇಡ ಪ್ಲೀಸ್ ಎಂದಿದ್ದರು.
ವಿಡಿಯೋಗಳು ವೈರಲ್ ಆಗಿ ಪ್ರಕರಣ ಗಂಭೀರವಾಗಿದ್ದರೂ ರಾಜ್ಯ ಸರ್ಕಾರ ಇದೀಗ ಏಕಾಏಕಿ ಅವರ ಅಮಾನತು ಆದೇಶವನ್ನು ವಾಪಸ್ ಪಡೆದುಕೊಂಡಿದ್ದು ಅಚ್ಚರಿಕೆ ಕಾರಣವಾಗಿದೆ. ಅಲ್ಲದೇ ಸರ್ಕಾರದ ಈ ನಡೆದ ಚರ್ಚೆಗೆ ಗ್ರಾಸವಾಗಿದೆ.
























