ಸವಣೂರಿನಲ್ಲಿ ಭೀಕರ ಅಪಘಾತ : ಯುವಕರಿಬ್ಬರು ಸಾವು

ಸ್ಕೂಟಿಗೆ ನೀರಿನ ಟ್ಯಾಂಕರ್‌ ಡಿಕ್ಕಿಯಾಗಿ ಸಂಭವಿಸಿದ ಅಪಘಾತ

ಕಡಬ: ಸ್ಕೂಟಿಗೆ ಟಾಂಕರ್‌ ಡಿಕ್ಕಿಯಾಗಿ ಸ್ಕೂಟಿ ಸವಾರಿ ಮಾಡುತ್ತಿದ್ದ ಯುವಕರಿಬ್ಬರು ಮೃತಪಟ್ಟ ಭೀಕರ ಅಪಘಾತ ಮಂಗಳವಾರ ಸಂಜೆ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ಸವಣೂರು ಸಮೀಪ ಚಾಪಳ್ಳ ತಿರುವಿನಲ್ಲಿ ಸಂಭವಿಸಿದೆ.

ಬಂಟ್ವಾಳದ ಕಲ್ಲಡ್ಕ ಸಮೀಪದ ಗೋಳ್ತಮಜಲಿನ ಯಜ್ಞೇಶ್‌ (20) ಮತ್ತು ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಜಗನ್‌ (21) ಮೃತಪಟ್ಟಿರುವ ದುರ್ದೈವಿಗಳು. ಯುವಕರಿಬ್ಬರು ಸ್ಕೂಟಿಯಲ್ಲಿ ಆಲಂಕಾರಿನ ದೇವಸ್ಥಾನಕ್ಕೆ ಹೋಗಿ ವಾಪಸು ಬರುವಾಗ ಈ ಭೀಕರ ಅಪಘಾತ ಸಂಭವಿಸಿದೆ.





















































 
 

ಯಜ್ಞೇಶ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದರು. ತಂದೆ, ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾರೆ. ಜಗನ್‌ ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿಯಾಗಿದ್ದು, ಇಂಟರ್ನ್‌ಶಿಪ್‌ ಮಾಡಲು ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ ಹೋಗಿಬಂದಿದ್ದರು ಎನ್ನಲಾಗಿದೆ. ಬಾಲ್ಯದಿಂದಲೇ ಕಲ್ಲಡ್ಕ ಸಮೀಪ ಕೊಳ್ಳಕೀರುವಿನಲ್ಲಿರುವ ಅಜ್ಜಿ ಮನೆಯಲ್ಲಿ ಬೆಳೆದಿದ್ದ ಜಗನ್‌ ತಂದೆ, ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾರೆ.

ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಅಲಂಕಾರಿನ ದೇವಸ್ಥಾನಕ್ಕೆ ಹೋಗಿ ಸ್ಕೂಟಿಯಲ್ಲಿ ವಾಪಸಾಗುತ್ತಿದ್ದಾಗ ಚಾಪಳ್ಳದ ತಿರುವಿನಲ್ಲಿ ನೀರು ಸಾಗಿಸುತ್ತಿದ್ದ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ. ಟ್ಯಾಂಕರ್‌ ಚಾಲಕ ಅಪಘಾತ ತಪ್ಪಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದು, ಇದರಿಂದ ಟ್ಯಾಂಕರ್‌ ಕೂಡ ರಸ್ತೆ ಬದಿಯ ಕಮರಿಗೆ ಹೋಗಿ ಬಿದ್ದಿದೆ. ಸ್ಕೂಟರ್‌ ಟ್ಯಾಂಕರ್‌ನ ಚಕ್ರಕ್ಕೆ ಸಿಲುಕಿದ ಕಾರಣ ಇಬ್ಬರು ಸವಾರರು ಚಕ್ರದಡಿಗೆ ಬಿದ್ದಿದ್ದಾರೆ. ಯಜ್ಞೇಶ್‌ ಸ್ಥಳದಲ್ಲೇ ಸಾವಿಗೀಡಾದರೆ ಜಗನ್‌ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರು ದೇಹಗಳ ಛಿದ್ರಗೊಂಡಿದ್ದವು.

error: Content is protected !!
Scroll to Top