ಜಾತಿ ನಿಂದನೆ ಕೇಸಿನಲ್ಲಿ ಬಂಧನಕ್ಕೆ ವಾರಂಟ್ ಜಾರಿ
ಬೆಂಗಳೂರು : ಜಾತಿನಿಂದನೆ ಆರೋಪದಡಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಹರಿಹರ ಟೌನ್ ಠಾಣೆ ಪ್ರಕರಣ ದಾಖಲಾಗಿದ್ದು, ಇದೀಗ ಈ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್‌ಗೆ ಕೋರ್ಟ್ ಬಂಧನದ ವಾರಂಟ್ ಜಾರಿ ಮಾಡಿದೆ. ಜಾತಿ ನಿಂದನೆ ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಜಡ್ಜ್ ಸಂತೋಷ್ ಗಜಾನನ ಭಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಮೇ 7ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಶಾಸಕ ಹರೀಶ್‌ಗೆ ಬಂಧನ ಭೀತಿ ಎದುರಾಗಿದೆ.
2023ರ ವಿಧಾನಸಭಾ ಚುನಾವಣೆ ಫಲಿತಾಂಶದ ಮರುದಿನ ದಲಿತ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಮೇಲೆ ಹರಿಹರ ಕ್ಷೇತ್ರದ ಬಿಎಸ್‌ಪಿ ಮುಖಂಡ ಹನುಮಂತಪ್ಪ ಎಂಬವರು ದೂರು ನೀಡಿದ್ದರು. ಈ ದೂರಿನ ಅನ್ವಯ ಹರಿಹರ ಟೌನ್ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ವಿಚಾರಣೆಗೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಜನಪ್ರತಿನಿಧಿಗಳು ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಮೇ 7ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ಹರಿಹರ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಕೆಲ ಮುಖಂಡರು ಬಿ.ಪಿ. ಹರೀಶ್‌ಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ಈ ವೇಳೆ ಬಿಜೆಪಿ ಸರಕಾರ ಮೀಸಲು ಹೆಚ್ಚಿಸಿದ್ದರೂ ದಲಿತರು ನಮಗೆ ಮತ ಹಾಕಿಲ್ಲ. ‘ಅಪ್ಪನಿಗೆ ಹುಟ್ಟಿದ ಮಾದಿಗರು ಮಾತ್ರ ಬಿಜೆಪಿಗೆ ಮತ ಹಾಕಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಬಿ. ಹನುಮಂತಪ್ಪ ಮತ್ತಿತರರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
























