ಕ್ಯಾನ್ಸರ್ ಗುಣಪಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಪಂಗನಾಮ : ದೂರು ದಾಖಲು

ಕಾರ್ಕಳ: ಕ್ಯಾನ್ಸರ್ ಚಿಕಿತ್ಸೆ ಗುಣ ಪಡಿಸುವ ಭರವಸೆ ನೀಡಿ ವ್ಯಕ್ತಿಯೊಬ್ಬರಿಗೆ 12 ಲಕ್ಷ ರೂ. ಪಂಗನಾಮ ಹಾಕಿದ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳ್ಮಣ್ಣಿನ ರೊನಾಲ್ಡ್ ರೋಡ್ರಿಗಸ್ ಅವರ ಪತ್ನಿ ಕ್ಯಾನ್ಸರ್‌ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಅವರನ್ನು ಮಾ. 23 ರಂದು ಮಣಿಪಾಲದ ‌ಕೆ. ಎಂ. ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ರೊನಾಲ್ಡ್ ಅವರಿಗೆ ಉಡುಪಿಯ ಕಡಿಯಾಳಿ ದೇವಾಲಯದ ಬಳಿ ಸಿದ್ದಾರ್ಥ ಎನ್ನುವವನ ‌ಪರಿಚಯವಾಗುತ್ತದೆ.

ಸಿದ್ದಾರ್ಥ ಅವರು ತನ್ನ ತಾಯಿಯೂ ಇದೇ ಸಮಸ್ಯೆಯಿಂದ ಬಳಲಿದ್ದು, ಆಯುರ್ವೇದ ಚಿಕಿತ್ಸೆ ಪಡೆದ ಬಳಿಕ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾನೆ. ಹಾಗೆಯೇ ಮಾಧವ ಎನ್ನುವಾತನ ಸಂಪರ್ಕ ಸಂಖ್ಯೆ ನೀಡಿ, ಆತನನ್ನು ಸಹ ಪರಿಚಯ ಮಾಡಿದ್ದಾನೆ.





















































 
 

ಇನ್ನು ರೊನಾಲ್ಡ್ ಅವರ ಪತ್ನಿಯ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚಾಗುತ್ತದೆ ‌ಎಂದು ನಂಬಿಸಿ ಅನಿಲ್ ಪವಾರ್ ಎಂಬ ಹೆಸರಿನಲ್ಲಿರುವ ಖಾತೆಗೆ ಹಣ ವರ್ಗಾವಣೆ ಮಾಡಿಸಿರುತ್ತಾನೆ. ಬಳಿಕ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ರೊನಾಲ್ಡ್‌ ರೋಡ್ರಿಗಸ್‌ ಅವರು ಅದೇ ದಿನ ತಮ್ಮ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಿಂದ ಎ.ಟಿ.ಎಂ. ಮುಖೇನ 40,000 ರೂ. ಹಣ ತೆಗೆದು ಆಪಾದಿತ ಸಿದ್ದಾರ್ಥ್‌ಗೆ ನೀಡಿರುತ್ತಾರೆ.

ಆಪಾದಿತನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಾತನಾಡಲು ಉಡುಪಿಯ ಮಾಂಡವಿ ಬಿಲ್ಡಿಂಗ್‌ನಲ್ಲಿರುವ ಆರ್ಯುವೇದಿಕ್ ಔಷಧಿ ಅಂಗಡಿಗೆ ಬರುವಂತೆ ತಿಳಿಸಿದ್ದು ರೊನಾಲ್ಡ್ ರೋಡ್ರಿಗಸ್‌ ಅವರು ಆಪಾದಿತನ ಜೊತೆಗೆ ಆಯುರ್ವೇದಿಕ್ ಔಷಧಿ ಅಂಗಡಿಗೆ ತೆರಳಿದಾಗ ಅಲ್ಲಿ ಅನಿಲ್ ಮತ್ತು ಮಾಧವ ಔಷಧಿಗೆ 10,80,000 ರೂ. ನೀಡುವಂತೆ ತಿಳಿಸಿದ್ದರು. ಅದರಂತೆ ರೊನಾಲ್ಡ್ ರೋಡ್ರಿಗಸ್ ಅವರು ಚೆಕ್ ಮೂಲಕ 3,00,000, 3,00,000, 3,00,000 ಹಾಗೂ 1,80,000 ರೂ. ಹಣವನ್ನು ಆಪಾದಿತ ಅನಿಲ್ ಎಂಬಾತನಿಗೆ ಪಾವತಿಸಿದ್ದಾರೆ.

ಆಪಾದಿತರು ನೀಡಿದ ಔಷಧಿಗಳನ್ನು ತಮ್ಮ ಪತ್ನಿಗೆ ನೀಡಿದ್ದರೂ ಇದುವರೆಗೆ ಅವರು ಗುಣಮುಖರಾಗದೆ ಇದ್ದು ಆಪಾದಿತರು ನೀಡಿದ ಪೋನ್ ನಂಬ್ರಗಳಿಗೆ ಕರೆ ಮಾಡಿದಾಗ ಆ ಮೊಬೈಲ್ ನಂಬ್ರಗಳು ಸ್ವಿಚ್ ಆಫ್ ಆಗಿರುತ್ತದೆ. ಆಪಾದಿತರು ರೊನಾಲ್ಡ್‌ ರೋಡ್ರಿಗಸ್‌ ಅವರ ಹೆಂಡತಿಗೆ ಇರುವ ಖಾಯಿಲೆಯನ್ನು ಗುಣಪಡಿಸುವುದಾಗಿ ನಂಬಿಸಿ ರೊನಾಲ್ಡ್ ರೋಡ್ರಿಗಸ್ ಅವರಿಂದ ಒಟ್ಟು 12,09,160 ರೂ. ಹಣ ಪಡೆದು ವಂಚಿಸಿರುವುದಾಗಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top