ಅಂಚೆ ಮತಪತ್ರದಲ್ಲಿ ಅಕ್ರಮ ಎಸಗಿದ ಕುರಿತು ಮೂವರ ವಿರುದ್ಧ ಕೇಸ್ ದಾಖಲು
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳಲ್ಲಿ ಅಕ್ರಮ ಆರೋಪದ ಮೇಲೆ ಶಾಸಕ ಡಿ.ಎನ್ ಜೀವರಾಜ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಚಿಕ್ಕಮಗಳೂರು ನಗರ ಠಾಣೆಗೆ ಅಂಚೆ ಮತ ಎಣಿಕೆ ಟೇಬಲ್‌ನ ಎಜೆಂಟ್ ಆಗಿರುವ ಸುಧೀರ್ ಕುಮಾರ್ ಮುರೋಳ್ಳಿ ದೂರು ನೀಡಿದ್ದಾರೆ. ಶಾಸಕ ಡಿ.ಎನ್.ಜೀವರಾಜ್, ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಟ್ರಾಂಗ್ ರೂಂ ಸೀಲ್ ಆಗಿರಲಿಲ್ಲ, ಮತಪತ್ರಗಳಿದ್ದ ಟ್ರಂಕ್ ಓಪನ್ ಆಗಿತ್ತು, ಟ್ರಂಕಿನ ಸೀಲ್ ಓಪನ್ ಆಗಿದ್ದು, ಲಾಕ್ ಕಟ್ ಆಗಿತ್ತು. ಹೀಗಾಗಿ ಮತ ಟ್ಯಾಂಪರಿಂಗ್ ಆಗಿರುವ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಮೂವರ ವಿರುದ್ಧ ವಂಚನೆ, ಕ್ರಿಮಿನಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಾಗಿದೆ.
























