ಚಾಲಕನ ಸಮಯ ಪ್ರಜ್ಞೆಯಿಂದ 17 ಪ್ರಯಾಣಿಕರು ಪಾರು
ಹಾವೇರಿ : ಬೆಂಗಳೂರಿನಿಂದ ಗದಗಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹೊತ್ತಿ ಉರಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಈ ಪಲ್ಲಕ್ಕಿ ಬಸ್ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ದೇವರಗುಡ್ಡದ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಪಕ್ಕೀರಪ್ಪ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಚಾಲಕನ ಈ ಸಮಯ ಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ತಪ್ಪಿದೆ. ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಧಗಧಗನೆ ಉರಿಯಿತು. ಸಾರಿಗೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬ್ರೇಕ್ ಲೈನ್ ದೋಷದಿಂದ ಬೆಂಕಿ ಅವಘಡ ಸಂಭವಿಸಿದ್ದು ಎನ್ನಲಾಗಿದೆ. ಬಸ್ ಚಾಲಕ ಪಕ್ಕೀರಪ್ಪ ಬೆಂಕಿ ನಂದಿಸಲು ಹರಸಹಾಸ ಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
























